ಮಡಿಕೇರಿ, ಏ. ೩೦: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಬ್ಯಾರೀಸ್ ವೆಲ್‌ಫೇರ್ ಟ್ರಸ್ಟ್ ಸಹಯೋಗದಲ್ಲಿ ನಗರದ ಕಾವೇರಿ ಹಾಲ್‌ನಲ್ಲಿ ನಡೆದ ಕೊಡಗು ಜಿಲ್ಲಾ ಮೊದಲ ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಏಳು ನಿರ್ಣಯಗಳನ್ನು ಮಂಡಿಸಲಾಯಿತು.

* ಮಡಿಕೇರಿಯಲ್ಲಿ ಬ್ಯಾರಿ ಸಮುದಾಯ ಭವನ ಸ್ಥಾಪನೆಗೆ ಕರ್ನಾಟಕ ಸರ್ಕಾರವು ನಿವೇಶನ ಹಾಗೂ ಬ್ಯಾರಿ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕು.

* ಮಡಿಕೇರಿ ಆಕಾಶವಾಣಿಯಲ್ಲಿ ಮೂಡಿಬರುತ್ತಿದ್ದ ಬ್ಯಾರಿ ವಾರ್ತೆ ಪ್ರಸಾರ ಸ್ಥಗಿತಗೊಂಡಿದ್ದು, ಆಕಾಶವಾಣಿಯಲ್ಲಿ ಬ್ಯಾರಿ ವಾರ್ತೆ ಮತ್ತೆ ಮೂಡಿ ಬರಬೇಕು. * ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸರಕಾರಿ ಕೋಟಾದ ಸೀಟುಗಳನ್ನು ಪಡೆಯುವ ಅರ್ಹತೆಗೆ ಏಳು ವರ್ಷ ಅಥವಾ ಎರಡು ವರ್ಷ ಕರ್ನಾಟಕದಲ್ಲೇ ಕಲಿತಿರಬೇಕೆಂಬ ನಿಯಮವಿದೆ. ಇದರಿಂದಾಗಿ ಹೊರ ರಾಜ್ಯ ಮತ್ತು ವಿದೇಶದಲ್ಲಿರುವ ಲಕ್ಷಾಂತರ ಕನ್ನಡಿಗ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ನಿಯಮವನ್ನು ತೆಗೆದು ಹಾಕುವಂತೆ ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಬೇಕು. * ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜುಗಳಲ್ಲಿ ವೈದ್ಯಕೀಯ ಸೀಟುಗಳನ್ನು ಪಡೆಯಬೇಕಾದರೆ ವಿದ್ಯಾರ್ಥಿಗಳು ಕನಿಷ್ಟ ಹತ್ತು ವರ್ಷ ಕರ್ನಾಟಕದಲ್ಲಿ ಕಲಿತಿರಿಬೇಕೆಂಬ ನಿಯಮವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರೂಪಿಸಿದೆ. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಕೋಟಾದ ಸೀಟುಗಳಿಂದ ವಂಚಿತರಾಗುತ್ತಿದ್ದಾರೆ. ಕರ್ನಾಟಕ ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಈ ನಿಯಮವನ್ನು ತೆಗೆದು ಹಾಕುವಂತೆ ಅಧಿಸೂಚನೆ ಹೊರಡಿಸಬೇಕು. * ಬ್ಯಾರಿ ಭಾಷೆಯನ್ನು ಉಳಿಸಲು, ಬೆಳೆಸಲು ಬ್ಯಾರಿ ಸಮುದಾಯ ಆದ್ಯತೆ ನೀಡಬೇಕು. ಮನೆಯಲ್ಲಿ ಎಲ್ಲರೂ ವಿಶೇಷವಾಗಿ ಮಕ್ಕಳು ಬ್ಯಾರಿಯಲ್ಲೇ ಮಾತನಾಡುವಂತಾಗಬೇಕು. * ಬ್ಯಾರಿ ಸಮುದಾಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಪ್ರಮಾಣ ಗಂಡು ಮಕ್ಕಳ ಶಿಕ್ಷಣಕ್ಕಿಂತ ಜಾಸ್ತಿಯಾಗುತ್ತಿರುವುದು ಸಾಮಾಜಿಕ ಅಸಮತೋಲನ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು ಗಂಡು ಮಕ್ಕಳ ಶಿಕ್ಷಣಕ್ಕೆ ಬ್ಯಾರಿ ಸಮುದಾಯವು ಒತ್ತು ನೀಡಬೇಕು.

* ಬ್ಯಾರಿ ಸಮುದಾಯದಲ್ಲಿ ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಜನಜಾಗೃತಿ ಯೋಜನೆಗಳನ್ನು ಬ್ಯಾರಿ ಸಂಘ-ಸAಸ್ಥೆಗಳು ರೂಪಿಸಬೇಕು.