ಕಾಯಪಂಡ ಶಶಿ ಸೋಮಯ್ಯ

ಮಡಿಕೇರಿ, ಏ. ೩೦: ಆರಂಭದ ಆಘಾತದಿಂದ ಹೊರಬಂದು ನಂತರದಲ್ಲಿ ಪುಟಿದೆದ್ದು ಅತ್ಯಮೋಘ ಪ್ರದರ್ಶನ ನೀಡಿದ ಕುಲ್ಲೇಟಿರ ಕುಟುಂಬ ಹಾಗೂ ವೇಗದಾಟದೊಂದಿಗೆ ಸ್ಥಿರಪ್ರದರ್ಶನ ತೋರಿದ ಚೆಪ್ಪುಡಿರ ಕುಟುಂಬ ೨೬ನೆಯ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ಚೇನಂಡ ಕಪ್‌ನ ಫೈನಲ್‌ಗೆ ಲಗ್ಗೆ ಹಾಕಿವೆ. ಈ ಎರಡೂ ತಂಡಗಳು ಪಂದ್ಯದ ಆರಂಭದಲ್ಲಿ ಹಿನ್ನಡೆ ಕಂಡರೂ ನಂತರದಲ್ಲಿ ಚೇತೋಹಾರಿ ಆಟದ ಪ್ರದರ್ಶನದೊಂದಿಗೆ ಫೈನಲ್ ಪಂದ್ಯಕ್ಕೆ ರಹದಾರಿ ಗಿಟ್ಟಿಸಿಕೊಂಡಿವೆ.

ಸೆಮಿಫೈನಲ್ ಪ್ರವೇಶಿಸಿದ್ದ ಪಳಂಗAಡ ಹಾಗೂ ಪರದಂಡ ತಂಡ ಉತ್ತಮ ಪ್ರದರ್ಶನ ನೀಡಿದರೂ ವಿಜಯಲಕ್ಷಿö್ಮ ಒಲಿಯದೆ ವಿರೋಚಿತ ಸೋಲು ಅನುಭವಿಸುವಂತಾಯಿತು. ನಾಪೋಕ್ಲುವಿನ ಜ. ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣ ಇಂದು ಎರಡು ಅತ್ಯುದ್ಭುತ ಪಂದ್ಯಕ್ಕೆ ಸಾಕ್ಷಿಯಾಯಿತು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಹಾಕಿ ಅಭಿಮಾನಿಗಳಿಗೆ ಎರಡೂ ಪಂದ್ಯಗಳು ಹಾಕಿಯ ರಸದೌತಣ ನೀಡಿತು. ರೋಮಾಂಚನಕಾರಿ ಪಂದ್ಯಗಳು, ಕೊನೆಯ ಕ್ಷಣದ ತನಕವೂ ಕುತೂಹಲ ಭರಿತವಾಗಿ ಜರುಗಿತು. ೨೬ನೆಯ ವರ್ಷದ ಕೌಟುಂಬಿಕ ಹಾಕಿ ಚಾಂಪಿಯನ್ ಪಟ್ಟ ಯಾರ ಮುಡಿಗೇರಲಿದೆ ಎಂಬ ಕೌತುಕಕ್ಕೆ ಉತ್ತರ ಸಿಗಲು ಕೇವಲ ಒಂದು ಹೆಜ್ಜೆ ಮಾತ್ರ ಬಾಕಿ ಉಳಿದಿದೆ. ಮೇ ೨ ರ ಶನಿವಾರ ಚೇನಂಡ ಕಪ್‌ಗಾಗಿ ಮಾಜಿ ಚಾಂಪಿಯನ್ ತಂಡವಾಗಿರುವ ಕುಲ್ಲೇಟಿರ ಹಾಗೂ ಈ ಹಿಂದೊಮ್ಮೆ ಫೈನಲ್ ತಲುಪಿದ್ದರೂ ಪ್ರಶಸ್ತಿ ಪಡೆಯುವಲ್ಲಿ ವಿಫಲವಾಗಿದ್ದ ಚೆಪ್ಪುಡಿರ ತಂಡಗಳು ಸೆಣಸಲಿವೆ. ಸೆಮಿಫೈನಲ್ ತಲುಪಿದ್ದ ನಾಲ್ಕೂ ತಂಡಗಳು ಬಲಿಷ್ಟವಾಗಿದ್ದ ಹಿನ್ನೆಲೆ ಕ್ರೀಡಾಭಿಮಾನಿಗಳು ರೋಮಾಂಚನಕಾರಿ ಆಟದ ನಿರೀಕ್ಷೆಯಲ್ಲಿದ್ದರು ಎರಡೂ ಪಂದ್ಯಗಳು ಈ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ.

ಪಳಂಗಡ v/s ಕುಲ್ಲೇಟಿರ

ಮೊದಲ ಸೆಮಿಫೈನಲ್ ಪಂದ್ಯ ಐದು ಬಾರಿಯ ಚಾಂಪಿಯನ್ ಪಳಂಗAಡ ಹಾಗೂ ಮೂರು ಬಾರಿಯ ಚಾಂಪಿಯನ್ ಕುಲ್ಲೇಟಿರ ನಡುವೆ ನಡೆಯಿತು. ಪಂದ್ಯದ ಮೊದಲ ಕ್ವಾರ್ಟರ್‌ನಲ್ಲೇ ಪಳಂಗAಡ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ತಂಡದ ಖ್ಯಾತ ಆಟಗಾರ ಅಮರ್ ಅಯ್ಯಮ್ಮ ಗೋಲು ದಾಖಲಿಸಿದಾಗ ಕುಲ್ಲೇಟಿರ ಪಾಳಯ ಆಘಾತ ಅನುಭವಿಸಿತು. ನಂತರದಲ್ಲಿ ಮುತ್ತಣ್ಣ ಮತ್ತೊಂದು ಗೋಲು ಬಾರಿಸಿದ್ದು, ಕುಲ್ಲೇಟಿರ ೨-೦ ಅಂತರದಿAದ ಹಿನ್ನಡೆ ಕಂಡಿತ್ತು. ಆದರೆ, ಮೂರು ಹಾಗೂ ನಾಲ್ಕನೇ ಕ್ವಾರ್ಟರ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಕುಲ್ಲೇಟಿರ ಶುಭಂ ಚಿಟ್ಟಿಯ್ಯಪ್ಪ ಹಾಗೂ ನಂತರದಲ್ಲಿ ಯಶಿಕ್ ಮುತ್ತಣ್ಣ ೨ ಗೋಲು ಗಳಿಸಿ ಅಂತರ ಸಮಗೊಳಿಸಿದಾಗ ಮೈದಾನದಲ್ಲಿ ನೆರೆದಿದ್ದವರ ಸಂಭ್ರಮ ಮುಗಿಲು ಮುಟ್ಟಿತ್ತು. ಅಂತರ ಸಮಗೊಂಡ ಹಿನ್ನೆಲೆ ಶೂಟೌಟ್ ನಿಯಮ ಅಳವಡಿಸಲಾಯಿತು. ಇದರಲ್ಲಿ ಕುಲ್ಲೇಟಿರ ಯತಿನ್ ಉತ್ತಯ್ಯ, ನಾಚಪ್ಪ ಗೋಲುಗಳಿಸಿದರೆ, ಪಳಂಗಡ ಪರ ಪೊನ್ನಪ್ಪ ಮಾತ್ರ ಗೋಲು ಬಾರಿಸಿದರು. ಅಂತಿಮವಾಗಿ ಕುಲ್ಲೇಟಿರ ೪-೩ ಗೋಲಿನಿಂದ ಜಯಗಳಿಸಿ ಫೈನಲ್‌ಗೆ ಪ್ರವೇಶ ಪಡೆಯಿತು.

ಚೆಪ್ಪುಡಿರ v/s ಪರದಂಡ

೨ನೇ ಸೆಮಿಫೈನಲ್ ಮಾಜಿ ರನ್ರ‍್ಸ್ ತಂಡಗಳಾದ ಈ ಬಾರಿಯ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಚೆಪ್ಪುಡಿರ ಹಾಗೂ ಪರದಂಡ ನಡುವೆ ನಡೆಯಿತು. ಇತ್ತಂಡಗಳು ಆರಂಭದಿAದಲೂ ವೇಗದಾಟದ ಪ್ರದರ್ಶನಕ್ಕೆ ಇಳಿದಿದ್ದವು. ಮೊದಲ ಅವಧಿಯಲ್ಲಿ ಪರದಂಡ ರಂಜನ್ ಅಯ್ಯಪ್ಪ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದಿತ್ತರು. ಈ ಆಘಾತದಿಂದ ಚೇತರಿಸಿಕೊಂಡ ಚೆಪ್ಪುಡಿರ ಬಿರುಸಿನ ಆಟಕ್ಕೆ ಇಳಿಯಿತು. ಮೊದಲಾರ್ಧದ ಕೊನೆಯ ಕ್ಷಣದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ನಲ್ಲಿ ಯಶಸ್ಸು ಕಂಡ ಚೆಪ್ಪುಡಿರ ದಿವಾನ್ ಸುಬ್ಬಯ್ಯ ಗೋಲು ಬಾರಿಸಿ ಅಂತರ ಸಮಗೊಳಿಸಿದರು. ೨ನೇ ಅವಧಿಯಲ್ಲಿ ಚೆಪ್ಪುಡಿರ ಚೇತನ್, ಪ್ರಣವ್, ವಚನ್ ತಲಾ ಒಂದೊAದು ಗೋಲು ಬಾರಿಸಿ ಅಂತರವನ್ನು ೪-೧ಕ್ಕೆ ಏರಿಸಿದಾಗ ಇನ್ನೇನು ಚೆಪ್ಪುಡಿರ ಗೆಲುವು ಖಚಿತ ಎನ್ನುವಂತಾಗಿತ್ತು. ಆದರೆ, ಮೂರು ಹಾಗೂ ನಾಲ್ಕನೇ ಕ್ವಾರ್ಟರ್‌ನಲ್ಲಿ ಪರದಂಡ ಆಟಗಾರರು ಬಿರುಸಿನ ಪ್ರದರ್ಶನಕ್ಕೆ ಇಳಿದರು. ಈ ಅವಧಿಯಲ್ಲಿ ರಂಜನ್ ಅಯ್ಯಪ್ಪ ಹಾಗೂ ಪ್ರಜ್ವಲ್ ಮುತ್ತಣ್ಣ ಇನ್ನೆರಡು ಗೋಲು ಬಾರಿಸಿ ಅಂತರ ೩-೪ಕ್ಕೆ ಇಳಿದಾಗ ವಿಜಯಲಕ್ಷಿö್ಮ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಮತ್ತೊಮ್ಮೆ ಸೃಷ್ಟಿಯಾಯಿತು. ಆದರೆ, ಪರದಂಡ ತಂಡದ ಎಲ್ಲಾ ಪ್ರಯತ್ನ ವಿಫಲಗೊಂಡು ತಂಡ ೪-೩ ಗೋಲಿನ ಅಂತರದಿAದ ವಿರೋಚಿತ ಸೋಲು ಅನುಭವಿಸಿತು. ಆತಂಕ ಎದುರಾದರೂ ಸ್ಥಿರತೆ ತೋರಿದ ಚೆಪ್ಪುಡಿರ ಫೈನಲ್ ಪ್ರವೇಶಿಸಿತು.