ಕಣಿವೆ, ಏ. ೩೦: ಕುಶಾಲನಗರ ತಾಲೂಕಿನ ಹೆಬ್ಬಾಲೆಯಿಂದ ಗುಮ್ಮನಕೊಲ್ಲಿ ಗ್ರಾಮದವರೆಗಿನ ಒಟ್ಟು ಹನ್ನೆರಡು ಗ್ರಾಮಗಳಿಗೆ ಕುಡಿಯುವ ಶುದ್ಧ ನೀರು ಪೂರೈಸುತ್ತಿದ್ದ ಹೆಬ್ಬಾಲೆಯ ಬಳಿಯ ಕಾವೇರಿ ನದಿಯಲ್ಲಿ ಗಣನೀಯ ಪ್ರಮಾಣದಲ್ಲಿ ನೀರಿನ ಹರಿವು ಕ್ಷೀಣಿಸಿದ ಪರಿಣಾಮ ನೀರಿಗೆ ತತ್ವಾರ ಎದುರಾಗಿದೆ.

ಹೆಬ್ಬಾಲೆ ಬಳಿ ಕಾವೇರಿ ನದಿ ದಂಡೆಯ ಜಾಕ್‌ವೆಲ್ ಗುಂಡಿಗೆ ಹರಿಯುತ್ತಿದ್ದ ನೀರು ಸಂಪೂರ್ಣ ಸ್ಥಗಿತವಾದ ಕಾರಣ ಗ್ರಾಮೀಣ ಕುಡಿಯುವ ನೀರು ಪೂರೈಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಜಾಕ್‌ವೆಲ್ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಮರಳು ಚೀಲ ಕಟ್ಟಿ ನೀರು ಸಂಗ್ರಹಿಸಿ ಹರಿಸುವುದಾಗಿ ಜೆಜೆಎಂ ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವೀರೇಂದ್ರ ‘ಶಕ್ತಿ’ ಗೆ ತಿಳಿಸಿದ್ದಾರೆ.

ಹೆಬ್ಬಾಲೆ, ಮರೂರು, ಹುಲುಸೆ, ಹಕ್ಕೆ, ಕಣಿವೆ, ಕೂಡಿಗೆ, ಕೂಡುಮಂಗಳೂರು, ವಿಜಯನಗರ, ಕೂಡ್ಲೂರು, ನವಗ್ರಾಮ, ಗುಮ್ಮನಕೊಲ್ಲಿ ಮೊದಲಾದ ಹನ್ನೆರಡು ಗ್ರಾಮಗಳಿಗೆ ಕಳೆದ ಎರಡು ದಶಕಗಳಿಂದ ನೀರು ಪೂರೈಸುತ್ತಿದ್ದ ಕಾವೇರಿ ನದಿಯಲ್ಲಿ ಈ ಬಾರಿ ನೀರಿನ ಹರಿವು ಸ್ಥಗಿತಗೊಂಡಿರುವುದು ಆತಂಕ ಸೃಷ್ಟಿಸಿದೆ.

ಈ ಬಾರಿ ಬೇಸಿಗೆಯ ಧಗೆ ಹೆಚ್ಚಿರುವ ಪರಿಣಾಮ ಜಲಮೂಲಗಳು ಸಂಪೂರ್ಣ ಬತ್ತುತ್ತಿವೆ. ಅದೇ ರೀತಿ ಹಾರಂಗಿ ಜಲಾಶಯದಲ್ಲೂ ಸಂಗ್ರಹಿತ ನೀರು ಆವಿಯಾಗುತ್ತಿದೆ. ಆದಾಗ್ಯೂ ಜನ ಹಾಗೂ ಜಾನುವಾರುಗಳ ಹಿತದೃಷ್ಟಿಯಿಂದ ಹಾರಂಗಿ ಜಲಾಶಯದಿಂದ ನದಿಗೆ ೩೦೦ ರಿಂದ ೫೦೦ ಕ್ಯೂಸೆಕ್ಸ್ ನೀರನ್ನು ಹರಿಸಿದರೂ ಕೂಡ ಭೂಮಿಯನ್ನು ಸುಡುತ್ತಿರುವ ಸೂರ್ಯನ ತಾಪಕ್ಕೆ ನದಿಯಲ್ಲಿ ಹರಿಯುವ ನೀರು ಕೂಡ ಆವಿಯಾಗುತ್ತಿದೆ. ಪರಿಣಾಮ ಜೀವನದಿಗೆ ಸಂಕಟ ಎದುರಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ತನ್ನ ಉಗಮ ಸ್ಥಾನ ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯಾದರೆ ಮಾತ್ರ ನದಿ ಒಂದಷ್ಟು ಚೇತರಿಕೆ ಕಾಣುತ್ತದೆ. ಇಲ್ಲವೇ ಜನ ಹಾಗೂ ಜಾನುವಾರುಗಳು ಘನ ಘೋರ ಪರಿಸ್ಥಿತಿ ಎದುರಿಸಬೇಕಾಗುತ್ತದೆ.