ಮೈಸೂರು, ಏ. ೩೦: ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ಅವರು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಕೊಡಗು ಕಾಫಿ ಸಹಕಾರ ಸಂಘ ಹಾಗೂ ಕಾಫಿ ಮಂಡಳಿ ನಡುವೆ ಇರುವ ವ್ಯಾಜ್ಯದ ಬಗ್ಗೆ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ೨೦೧೫ರಲ್ಲಿ ಸಾಲ ಮನ್ನಾ ವಿಚಾರದಲ್ಲಿ ಕೊಡಗು ಕಾಫಿ ಸಹಕಾರಿ ಸಂಘ ಮತ್ತು ಕಾಫಿ ಮಂಡಳಿಯ ನಡುವೆ ದೀರ್ಘಕಾಲದಿಂದ ಬಾಕಿ ಇರುವ ಸಮಸ್ಯೆಯನ್ನು ಚರ್ಚಿಸಲಾಯಿತು. ನ್ಯಾಯಾಲಯದ ನಿರ್ದೇಶನ ಇರುವುದರಿಂದ ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಇದರಿಂದ ಕೊಡಗು ಕಾಫಿ ಬ್ರಾö್ಯಂಡ್ ಅನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಲು ಅನುಕೂಲವಾಗುತ್ತದೆ ಮತ್ತು ಸಹಕಾರಿ ಸಂಸ್ಥೆಯನ್ನು ಬೆಂಬಲಿಸಲು ಸಕಾಲಿಕ ಕ್ರಮ ಕೈಗೊಳ್ಳಬೇಕೆಂದರು. ಇದರೊಂದಿಗೆ ತಂಬಾಕು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆದರು ಹರಾಜು ಕಾರ್ಯ ವಿಧಾನದಲ್ಲಿ ಸುಧಾರಣೆ ತರಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.