ಸೋಮವಾರಪೇಟೆ, ಏ. ೩೦: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ, ಪಟ್ಟಣವಾಸಿಗಳಿಗೆ ಕುಡಿಯುವ ನೀರು ಒದಗಿಸುವ ಅಮೃತ್-೨ ಯೋಜನೆಯ ಕಾಮಗಾರಿ ಪಟ್ಟಣದಲ್ಲಿ ಪ್ರಗತಿಯಲ್ಲಿದ್ದು, ವಾರ್ಡ್ ೧೧ಕ್ಕೆ ಒಳಪಡುವ ಲೋರ‍್ಸ್ ಕಾಲೋನಿಯಲ್ಲಿ ಮಾತ್ರ ಅವಾಂತರ ಸೃಷ್ಟಿಸಿದೆ.

ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಸಲುವಾಗಿ ಕಳೆದ ೪ ತಿಂಗಳ ಹಿಂದೆ ಗಲ್ಲಿ ರಸ್ತೆಯನ್ನು ಅಗೆಯಲಾಗಿದೆ. ಈ ಹಿಂದೆ ಅಳವಡಿಸಿದ್ದ ಇಂಟರ್‌ಲಾಕ್‌ಗಳನ್ನು ತೆಗೆದು ಹಾಗೆಯೇ ಬಿಟ್ಟಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ನಡೆದಾಡಲೂ ಸಮಸ್ಯೆಯಾಗಿದೆ.ಕಿಷ್ಕಿಂಧೆಯAತಾಗಿರುವ ರಸ್ತೆಯಲ್ಲಿ ಇಂಟರ್‌ಲಾಕ್‌ಗಳನ್ನು ತೆಗೆದು ಹಾಗೆಯೇ ಬಿಟ್ಟಿರುವುದರಿಂದ ವೃದ್ಧರು, ಸಣ್ಣಮಕ್ಕಳು ಬಿದ್ದು ಗಾಯಾಳುಗಳಾಗುತ್ತಿದ್ದಾರೆ. ಬೈಕ್‌ಗಳು ತೆರಳಲೂ ಕಷ್ಟಕರವಾಗಿದೆ. ಈ ಬಗ್ಗೆ ಸಂಬAಧಿಸಿದ ಪಟ್ಟಣ ಪಂಚಾಯಿತಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರು, ಸಮಸ್ಯೆ ಬಗ್ಗೆ ಅರವಿಗೆ ಬಂದಿದ್ದು, ಪ್ರಸ್ತುತ ಪಟ್ಟಣದ ಮುಖ್ಯ ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ತಕ್ಷಣ ಈ ರಸ್ತೆಯನ್ನು ಸರಿಪಡಿಸಲು ಅಮೃತ್-೨ ಯೋಜನೆಯ ಅಭಿಯಂತರರಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.