ಸಿದ್ದಾಪುರ ಏ ೨೯ : ಹಾಸನ ಜಿಲ್ಲೆಯ ಬೇಲೂರು ಭಾಗದಲ್ಲಿ ಸೆರೆ ಹಿಡಿದ ಸಲಗವನ್ನು ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಲಾಗುತ್ತಿದೆ. ಬೇಲೂರು ತಾಲೂಕಿನ ಗ್ರಾಮವೊಂದರಲ್ಲಿ ಕಾಫಿ ತೋಟದಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ಒಂಟಿ ದಂತದ ಕಾಡಾನೆಯನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿತ್ತು. ಅಂದಾಜು ೧೮ ವರ್ಷ ಪ್ರಾಯದ ಕಾಡಾನೆ ಗ್ರಾಮದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಮಾನವನ ಮೇಲೆ ದಾಳಿ ನಡೆಸುತ್ತಿತ್ತು. ಸೆರೆ ಹಿಡಿದ ಆನೆಯನ್ನು ಲಾರಿಯಲ್ಲಿ ಹತ್ತಿಸಿ ಬೇಲೂರಿನಿಂದ ದುಬಾರೆ ಸಾಕಾನೆಗಳ ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ದುಬಾರೆಯ ಸಾಕಾನೆ ಶಿಬಿರದ ಕ್ರಾಲ್‌ನಲ್ಲಿ ಕಾವಾಡಿಗರು ಪಳಗಿಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮೂರು ತಿಂಗಳ ಕಾಲ ಪಳಗಿಸಿದ ಬಳಿಕ ಇದಕ್ಕೆ ನಾಮಕರಣ ಮಾಡಿ ಹೊರಬಿಡಲಾಗುತ್ತದೆ ಎಂದು ತಿಳಿದು ಬಂದಿದೆ.