ಸೋಮವಾರಪೇಟೆ, ಏ. ೨೯: ಅರಣ್ಯ ಇಲಾಖೆಯ ಹುಲಿಮಿತ್ರ ಯೋಜನೆ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಮವಾರಪೇಟೆ ಪತ್ರಕರ್ತರ ತಂಡ ಜಯಭೇರಿ ಬಾರಿಸುವ ಮೂಲಕ ಕಪ್ ತನ್ನದಾಗಿಸಿಕೊಂಡಿದೆ. ರನ್ರ‍್ಸ್ ಅಪ್ ಸ್ಥಾನವನ್ನು ಪಿಡಿಓ ತಂಡ ಪಡೆದಿದೆ.
ಸಮೀಪದ ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು. ಅರಣ್ಯ ಇಲಾಖೆಗಳ ತಂಡ, ಸೋಮವಾರಪೇಟೆ ಪೊಲೀಸ್ ತಂಡ, ಪಿಡಿಓ ತಂಡ, ಅರಣ್ಯ ವ್ಯಾಪ್ತಿಯ ಸಾರ್ವಜನಿಕರ ತಂಡ ಸೇರಿದಂತೆ ಒಟ್ಟು ೧೦ ತಂಡಗಳು ಪಾಲ್ಗೊಂಡಿದ್ದವು. ಎರಡು ಗುಂಪುಗಳಲ್ಲಿ ತಲಾ ೫ ತಂಡಗಳು ಲೀಗ್ ಹಂತದಲ್ಲಿ ಸೆಣಸಾಟ ನಡೆಸಿದವು. ಎರಡು ಗುಂಪುಗಳಿAದ ಅಗ್ರ ಸ್ಥಾನ ಪಡೆದ ತಲಾ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದವು. ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಶನಿವಾರಸಂತೆ ಆರ್ ಆರ್ ಟಿ ತಂಡ ಮತ್ತು ಪಿಡಿಓ ತಂಡ ಸೆಣೆಸಿ ಪಿಡಿಓ ತಂಡ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸೋಮವಾರಪೇಟೆ ಪತ್ರಕರ್ತರ ತಂಡ ಮತ್ತು ಆಲೂರು ಸಿದ್ದಾಪುರದ ಆರ್.ಆರ್.ಟಿ ತಂಡ ಸೆಣಸಾಟ ನಡೆಸಿತು. ಸೋಮವಾರಪೇಟೆ ಪ್ರೆಸ್ ತಂಡ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿತ್ತು.
ಸರಣಿ ಶ್ರೇಷ್ಠ ಪ್ರಶಸ್ತಿ ಮತ್ತು ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಸೋಮವಾರಪೇಟೆ ಪ್ರೆಸ್ ತಂಡದ ಆಟಗಾರ ನಿಖಿಲ್ ಪಡೆದುಕೊಂಡರು. ಉತ್ತಮ ಬೌಲರ್ ಪ್ರಶಸ್ತಿಯನ್ನು ಸೋಮವಾರಪೇಟೆ ಪ್ರೆಸ್ ತಂಡದ ಆಟಗಾರ ಕಮರುದ್ದೀನ್ ಪಡೆದುಕೊಂಡರು. ಪ್ರೆಸ್ ತಂಡದ ನಾಯಕ ದುಷ್ಯಂತ್ ಕುಮಾರ್ ವಿನ್ರ‍್ಸ್ ಟ್ರೋಫಿಯನ್ನು ಅತಿಥಿಗಳಿಂದ ಸ್ವೀಕರಿಸಿದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ, ಎಸಿಎಫ್ ಗೋಪಾಲ್, ಆರ್ ಎಫ್ ಒ ಶೈಲೇಂದ್ರಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರೋಗ್ಯ ನಿರೀಕ್ಷಕ ಜಾಸಿಂ ಖಾನ್ ಈ ಸಂದರ್ಭ ಉಪಸ್ಥಿತರಿದ್ದರು.