ಗೋಣಿಕೊಪ್ಪಲು, ಏ. ೨೯: ಯರವ ಕುಟುಂಬದ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ೧೩ನೇ ವರ್ಷದ ಉಳಕುಚ್ಚುಲಾತ್ಲೇರಂಡ ಮನೆತನದ ಯರವ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ೫ ದಿನಗಳ ಕಾಲ ನಡೆಯುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲೆಯ ೬೦ ಯರವ ಕುಟುಂಬಗಳು ಭಾಗವಹಿಸುತ್ತಿವೆ. ಇದೇ ಮೊದಲ ಬಾರಿಗೆ ೮ ಮಹಿಳಾ ತಂಡಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ಕ್ರಿಕೆಟ್ ಪಂದ್ಯಾವಳಿಯನ್ನು ಕಾಪ್ಸ್ ವಿದ್ಯಾ ಸಂಸ್ಥೆಯ ಪಬ್ಲಿಕ್ ರಿಲೆಷನ್ ಮ್ಯಾನೇಜರ್ ಅಣ್ಣಳಮಾಡ ಮಾನಸ ತಿಮ್ಮಯ್ಯ, ಪಾಲಿಬೆಟ್ಟದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಬ್ಯಾಟ್ ಮಾಡುವ ಮೂಲಕ ಉದ್ಘಾಟಿಸಿದರು.
೫ ದಿನಗಳ ಕಾಲ ನಡೆಯುವ ಕ್ರೀಡಾ ಕೂಟಕ್ಕೆ ಸಮಾಜದವರು ಸಾಂಪ್ರದಾಯಿಕವಾಗಿ ಗುರು ಹಿರಿಯರಿಗೆ, ದೇವಾನು ದೇವತೆಗಳಿಗೆ ಮುಂಜಾನೆ ಪೂಜೆ ಸಲ್ಲಿಸಿ ೧೩ನೇ ವರ್ಷದ ಕಾರ್ಯಕ್ರಮ ಆರಂಭಿಸಿದರು. ಅತಿಥಿಗಳನ್ನು ಯರವ ಸಾಂಪ್ರದಾಯಿಕ ದುಡಿಕೊಟ್ಟಿನ ಮೂಲಕ ಮೈದಾನಕ್ಕೆ ಕರೆತರಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಗೋಣಿಕೊಪ್ಪ ಕಾಪ್ಸ್ ವಿದ್ಯಾ ಸಂಸ್ಥೆಯ ಪಬ್ಲಿಕ್ ರಿಲೆಷನ್ ಮ್ಯಾನೇಜರ್ ಅಣ್ಣಳಮಾಡ ಮಾನಸ ತಿಮ್ಮಯ್ಯ ಮಾತನಾಡಿ, ಬದುಕಿನಲ್ಲಿ ಉತ್ತಮ ಗುರಿಯನ್ನು ಇಟ್ಟುಕೊಂಡು ಮುಂದೆ ಸಾಗಬೇಕು. ಯಾವುದೇ ಕಷ್ಟ ಬಂದರೂ ಎದೆ ಗುಂದದೆ ಧೈರ್ಯದಿಂದ ಎದುರಿಸುವಂತಾಗಬೇಕು ಎಂದರು.
ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ಯರವ ಸಮಾಜವು ಈ ರೀತಿಯ ಕ್ರೀಡೆಯನ್ನು ನಡೆಸುತ್ತಿರುವುದು ಶ್ಲಾಘನೀಯ. ಹಿಂದುಳಿದ ಸಮಾಜಗಳಿಗೆ ಸರ್ಕಾರ ಸ್ಪಂದಿಸುವAತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಿ.ಆರ್. ಪಂಕಜ ಮಾತನಾಡಿ, ಶಿಸ್ತು ಬದ್ಧವಾಗಿ ಕ್ರೀಡೆಯನ್ನು ಆಯೋಜಿಸಲಾಗಿದೆ. ವಿದ್ಯಾಭ್ಯಾಸಕ್ಕೆ ಸಮಾಜದವರು ಒತ್ತು ನೀಡಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಯರವ ಸಮಾಜದ ಅಧ್ಯಕ್ಷ ಪಿ.ಕೆ.ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬಂದಿದ್ದೇವೆ. ಸರ್ಕಾರ ಮುಂದಿನ ಸಾಲಿನಿಂದ ನಮ್ಮನ್ನು ಗುರುತಿಸಿ ಕ್ರೀಡೆಗೆ ಅನುದಾನ ಬಿಡುಗಡೆ ಮಾಡಬೇಕು. ಕಳೆದ ೧೩ ವರ್ಷಗಳಿಂದ ದಾನಿಗಳು ನೀಡುತ್ತಿರುವ ಸಹಾಯವನ್ನೇ ನಂಬಿಕೊAಡು ಕ್ರೀಡೆಯನ್ನು ನಡೆಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಲ್ಯಾಂಪ್ಸ್ ಸೊಸೈಟಿಯ ಅಧ್ಯಕ್ಷರಾದ ಪಿ.ಕೆ.ಮಣಿಕುಂಞÂ, ಉಪಾಧ್ಯಕ್ಷೆ ಪುಷ್ಪ, ಗಿರಿಜನ ಮುಖಂಡರಾದ ದಿನೇಶ್, ಪಿ.ಸಿ.ಬೋಜಪ್ಪ, ಯರವ ಸಮಾಜದ ಗೌರವ ಅಧ್ಯಕ್ಷ ರವಿ, ಐಟಿಡಿಪಿ ಇಲಾಖೆಯ ಪಿ.ಸಿ.ಕಾಶಿ, ಸಮಾಜ ಸೇವಕಿ ಪುಷ್ಪ, ಯರವ ಸಮಾಜದ ಗುರುಗಳಾದ ಮಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌ.ಅಧ್ಯಕ್ಷ ರವಿ ಪ್ರಾರ್ಥಿಸಿ, ಯರವ ಸಮಾಜದ ಮಾಜಿ ಕಾರ್ಯದರ್ಶಿ ಸಂಜೀವ ಸ್ವಾಗತಿಸಿ, ಸದಸ್ಯರಾದ ಪ್ರತಿಮಾ ಕಾರ್ಯಕ್ರಮ ನಿರೂಪಿಸಿ, ನಿತಿನ್ ವಂದಿಸಿದರು. - ಹೆಚ್.ಕೆ.ಜಗದೀಶ್