ಮಡಿಕೇರಿ ಏ. ೨೯: ಮಡಿಕೇರಿ ನಗರದ ಹೊರವಲಯದ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ ಮೇ ೫ರಂದು ಶ್ರದ್ಧಾಭಕ್ತಿಯಿಂದ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಜರಾಜೇಶ್ವರಿ ದೇವಾಲಯದ ಧರ್ಮದರ್ಶಿ ಗೋವಿಂದ ಸ್ವಾಮಿ ಅವರು, ದೇವಾಲಯಕ್ಕೆ ಸುಮಾರು ೮೦ ವರ್ಷಗಳ ಇತಿಹಾಸವಿದೆ. ವಾರ್ಷಿಕೋತ್ಸವ ಹಾಗೂ ರಥೋತ್ಸವದಲ್ಲಿ ರಾಜ್ಯ ಮತ್ತು ಹೊರ ರಾಜ್ಯದ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಭಕ್ತರ, ದಾನಿಗಳ, ವಿವಿಧ ಸಂಘ ಸಂಸ್ಥೆಗಳ, ಸ್ವಯಂಸೇವಕರ ಸಹಕಾರದಿಂದ ಪ್ರತಿವರ್ಷ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ದೇವಾಲಯದಲ್ಲಿ ಪ್ರತಿದಿನ ಭಕ್ತರಿಗಾಗಿ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಾರ್ಷಿಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ದೇವಾಲಯ ಸಮಿತಿಯ ಸದಸ್ಯ ಕಿರಣ್ ಕುಮಾರ್ ಮಾತನಾಡಿ ವಾರ್ಷಿಕೋತ್ಸವ ಹಾಗೂ ರಥೋತ್ಸವದ ಮಾಹಿತಿ ನೀಡಿದರು.

ಮೇ ೫ ರಂದು ಬೆಳಿಗ್ಗೆ ೬ ಗಂಟೆಗೆ ಧ್ವಜಾರೋಹಣ, ೬.೩೦ಕ್ಕೆ ಗಣಪತಿ ಹೋಮ, ೭.೩೦ಕ್ಕೆ ದೇವಿಗೆ ಅಭಿಷೇಕ, ಹೂವಿನ ಅಲಂಕಾರ ನಂತರ ತೀರ್ಥಸ್ನಾನ, ೯.೨೦ಕ್ಕೆ ಕಳಸ ಪೂಜೆ, ನೈವೇದ್ಯ ಪ್ರಸಾದ ಹಾಗೂ ಮಹಾ ಮಂಗಳಾರತಿ ನಡೆಯಲಿದೆ.

೧೧.೪೫ಕ್ಕೆ ಶುಭ ಕಾಲದಂದು ದೇವಿಯ ರಥೋತ್ಸವವು ದೇವಸ್ಥಾನದ ಆವರಣದ ಸುತ್ತಲೂ ನಡೆಯಲಿದೆ. ರಥ ಎಳೆಯುವ ಭಕ್ತರು ಮೂರು ದಿನಗಳ ಕಾಲ ಶುದ್ಧದಲ್ಲಿರಬೇಕು.

ನಂತರ ತುಲಾಭಾರ, ತಲೆಮುಡಿ ತೆಗೆಯುವುದು, ತೀರ್ಥಸ್ನಾನ, ಉರುಳು ಸೇವೆ, ಕುಂಕುಮ ಅರ್ಚನೆ ಮತ್ತು ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ ೧೨ ಗಂಟೆಯಿAದ ಅನ್ನಸಂತರ್ಪಣೆಯಾಗಲಿದ್ದು, ೧೨.೩೦ಕ್ಕೆ ತಾಯಿಯ ದರ್ಶನವಿರುತ್ತದೆ.

ಸಂಜೆ ೬ ಗಂಟೆಗೆ ದೇವಸ್ಥಾನದ ಆವರಣದಲ್ಲಿ ಭಕ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದೀಪಾಲಂಕಾರ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಗುವುದು. ರಾತ್ರಿ ೯ ಗಂಟೆಗೆ ಅನ್ನದಾನ ಸೇವೆ, ದೇವಿಯ ದರ್ಶನ ಹಾಗೂ ಪೂಜಾ ಕಾರ್ಯಕ್ರಮ ಜರುಗಲಿದೆ.

ಜಾತ್ರೋತ್ಸವ ದಿನದಂದು ನೈವೇದ್ಯ ಪ್ರಸಾದ, ಅನ್ನದಾನ, ರಥ ಅಲಂಕಾರ, ದೇವಸ್ಥಾನದ ಹೂವಿನ ಆಲಂಕಾರ, ವಿದ್ಯುತ್ ದೀಪಾಲಂಕಾರಗಳನ್ನು ಮಾಡಲು ಇಚ್ಛಿಸುವವರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವವರು ಖುದ್ದಾಗಿ ದೇವಾಲಯದ ಆಡಳಿತ ಕಚೇರಿಯನ್ನು ಸಂಪರ್ಕಿಸುವAತೆ ಕಿರಣ್ ಕುಮಾರ್ ತಿಳಿಸಿದರು.

ಶ್ರೀ ರಾಜರಾಜೇಶ್ವರಿ ದೇವಾಲಯದ ಭಕ್ತ ಚುಮ್ಮಿ ದೇವಯ್ಯ ಮಾತನಾಡಿ ದೇವಾಲಯವು ರಾಜ್ಯ ಹಾಗೂ ಹೊರ ರಾಜ್ಯದ ಅಪಾರ ಭಕ್ತ ಸಮೂಹವನ್ನು ಹೊಂದಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು, ಮಳೆಗಾಗಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಭಕ್ತರಾದ ಹರೀಶ್ ಉಪಸ್ಥಿತರಿದ್ದರು. ವಾರ್ಷಿಕೋತ್ಸವಕ್ಕೆ ಸಹಕಾರ ನೀಡುವ ಭಕ್ತರು ೯೪೮೦೭೩೦೫೨೩, ೯೪೮೧೯೫೯೦೮೦, ೦೮೨೭೨-೨೯೫೬೬೮ ನ್ನು ಸಂಪರ್ಕಿಸಬಹುದಾಗಿದೆ.