ಸೋಮವಾರಪೇಟೆ, ಏ. ೨೯ : ನಾವು ಸಂಸ್ಥೆ ಹಾಗೂ ಗುಡ್ ಮೈಂಡ್ಸ್ ಹದಿನೈದು ದಿನಗಳ ಕಾಲ ಪಟ್ಟಣದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ‘ಮಕ್ಕಳ ಬಾಲ್ಯ ಕಟ್ಟುವ ಹಬ್ಬ’ ಹೆಸರಿನ ಮಕ್ಕಳ ಶಿಬಿರ ಮುಕ್ತಾಯಗೊಂಡಿತು. ಮಕ್ಕಳು ತಾವೇ ರಚಿಸಿದ ಕವಿತೆಗಳು, ಕಥೆಗಳು, ನಾಟಕಗಳು, ನಟನೆ, ನಿರೂಪಣೆ ಹಾಗೂ ನೃತ್ಯಗಳ ಮೂಲಕ ತಮ್ಮ ಕಲಾತ್ಮಕ ಸಾಮರ್ಥ್ಯವನ್ನು ಪ್ರದರ್ಶಿಸಿ ಗಮನ ಸೆಳೆದರು. ಗ್ರಾಮೀಣ ಆಟಗಳನ್ನು ಕಲಿತು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ನಾವು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಸುಮನ ಮಾತನಾಡಿ, ಈ ಅವಧಿಯಲ್ಲಿ ಮಕ್ಕಳ ಸೃಜನಾತ್ಮಕತೆ ಮತ್ತು ಪ್ರತಿಭೆಯನ್ನು ಉತ್ತೇಜಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳನ್ನು ಹೋಲಿಕೆ ಮಾಡುವುದಕ್ಕಿಂತ ಅವರ ಸ್ವಭಾವ ಮತ್ತು ಆಸಕ್ತಿಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದರು.

ನಾವು ಸಂಸ್ಥೆಯ ಸಂಸ್ಥಾಪಕ ಗೌತಮ್ ಕಿರಗಂದೂರು, ಮಕ್ಕಳ ಸೃಜನಶೀಲತೆ ಸಮಾಜದ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಂಜೀವ್ ಕುಮಾರ್ ಮತ್ತು ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಅವರುಗಳು ಮಕ್ಕಳ ಮನೋವಿಕಾಸದ ಬಗ್ಗೆ ಮಾರ್ಗದರ್ಶನ ನೀಡಿದರು. ಮಕ್ಕಳ ಬಾಲ್ಯ ಕಟ್ಟುವ ಹಬ್ಬದ ಅಂಗವಾಗಿ ಹಕ್ಕಿಗೊಂದು ಗುಟುಕು-೨೦೨೬ ಅಭಿಯಾನದಲ್ಲಿ ಭಾಗವಹಿಸಿ ವಿಜೇತರಾದ ಕಾಸರಗೋಡುವಿನ ಕಿರಣ್, ಉಡುಪಿಯ ಅನಾಘ ಇವರುಗಳಿಗೆ ಬಹುಮಾನವನ್ನು ನೀಡಲಾಯಿತು.