ವೀರಾಜಪೇಟೆ, ಏ. ೨೯: ತಾತ ಹಾಗೂ ಮೊಮ್ಮಗನ ನಡುವೆ ಕಲಹ ನಡೆದು ತಾತ ಮೊಮ್ಮಗನನ್ನು ಹತ್ಯೆ ಮಾಡಿರುವ ಘಟನೆ ವೀರಾಜಪೇಟೆ ಬಳಿಯ ಬೇಟೋಳಿ ಗ್ರಾಮದಲ್ಲಿ ನಡೆದಿದೆ.
ಬೇಟೋಳಿ ಗ್ರಾಮದ ಎ.ಕೆ. ಗಣೇಶ್ ಎಂಬವರ ಲೈನ್ ಮನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದ ಪಣಿ ಎರವರ ಅಪ್ಪು (೬೦) ಮತ್ತು ಆತನ ಮೊಮ್ಮಗ ಪಣಿ ಎರವರ ಸಂಜು (೧೯) ಎಂಬವರು ನಿನ್ನೆ ದಿನನಿತ್ಯದಂತೆ ಕೆಲಸ ಮಾಡಿ ಮನೆಗೆ ಬಂದಿದ್ದಾರೆ. ನಂತರ ಸಂಜೆ ಲೈನ್‌ಮನೆಯಲ್ಲಿ ಕ್ಷÄಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದ್ದು, ಅಕ್ಕಪಕ್ಕದವರು ಬಂದು ಇಬ್ಬರಿಗೂ ಬುದ್ಧಿ ಹೇಳಿ ಸಮಾಧಾನ ಮಾಡಿ ಜಗಳ ಬಿಡಿಸಿದ್ದಾರೆ.
ನಂತರ ರಾತ್ರಿ ೮ ಗಂಟೆ ಸುಮಾರಿಗೆ ಮತ್ತೆ ಅಜ್ಜ ಮತ್ತು ಮೊಮ್ಮಗನಿಗೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಅಪ್ಪು ಎಂಬಾತನು, ತನ್ನ ಮೊಮ್ಮಗ ಸಂಜುವಿನ ಕುತ್ತಿಗೆಯ ಎಡಭಾಗಕ್ಕೆ ಕತ್ತಿಯಿಂದ ಬಲವಾಗಿ ಹಲ್ಲೆ ನಡೆಸಿದ್ದಾನೆ. ನಂತರ ಎಡಕಾಲಿಗೂ ಹಲ್ಲೆ ಮಾಡಿದ್ದು, ಕೂಗಾಟ ಕೇಳಿ ತೋಟದ ಮಾಲೀಕ ಎ.ಕೆ. ಗಣೇಶ್ ಮತ್ತಿತರರು ಬಂದು ಗಾಯಾಳುವಿಗೆ ವೀರಾಜಪೇಟೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ ಸಂದರ್ಭ ಗಾಯಾಳು ದಾರಿಯಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮೃತ ಸಂಜು ಕೆಲ ವರ್ಷಗಳ ಹಿಂದೆ ಬಾಲಕನಾಗಿದ್ದಾಗಲೇ ತನ್ನ ಅಜ್ಜಿಯನ್ನು ಹಲ್ಲೆ ನಡೆಸಿ ಕೊಲೆ ಮಾಡಿ ಬಾಲಾಪರಾಧಿಯಾಗಿ ಶಿಕ್ಷೆ ಅನುಭವಿಸಿ ನಂತರ ಮನೆಗೆ ಬಂದು ಅಜ್ಜನೊಂದಿಗೆ ವಾಸವಿದ್ದ. ಈ ಘಟನೆಗೆ ಹಿಂದಿನ ವೈಷಮ್ಯವೇ ಕಾರಣ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ವೀರಾಜಪೇಟೆ ನಗರ ಪೊಲೀಸ್ ಠಾಣಾಧಿಕಾರಿ ಹೆಚ್.ಎಸ್. ಪ್ರಮೋದ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿ ಅಪ್ಪುವÀನ್ನು ನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ .