ವೀರಾಜಪೇಟೆ, ಏ. ೨೯: ಕೊಡಗಿನಲ್ಲಿ ಅದರಲ್ಲೂ ವಿಶೇಷವಾಗಿ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ವನ್ಯಜೀವಿ ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಡಾನೆ ಹಾಗೂ ಹುಲಿ ದಾಳಿಗೆ ಮಾನವ ಹಾಗೂ ರೈತರ ಜಾನುವಾರುಗಳು ಬಲಿಯಾಗಿ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ವೀರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಯಿತು. ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಆಕ್ರೋಶಗೊಂಡ ರೈತರು, ಹಾಗೂ ಬಿಜೆಪಿಯವರು ವೀರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ನೇತೃತ್ವದಲ್ಲಿ ವೀರಾಜಪೇಟೆಯ ಗಾಂಧಿನಗರದಲ್ಲಿರುವ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಬಿಜೆಪಿಯವರು ಪ್ರತಿಭಟನೆಗಾಗಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪ್ರತಿಭಟನಾಕಾರರನ್ನು ಅರಣ್ಯ ಇಲಾಖೆಯ ಗೇಟ್ ಬಳಿಯೇ ಪೊಲೀಸರು ತಡೆದರು. ಈ ವೇಳೆ ಬಿಸಿಲಿನಲ್ಲಿಯೇ ನಿಂತು ಪ್ರತಿಭಟಿಸಿ, ಧಿಕ್ಕಾರ ಕೂಗಿದರಲ್ಲದೆ, ಒಳಗಡೆ ಹೋಗಲು ಅವಕಾಶ ಕೊಡಿ ಎಂದರೂ ಪೊಲೀಸರು ಬಿಡಲೇ ಇಲ್ಲ. ಇದರಿಂದ ಬಿಜೆಪಿಯವರು ಆಕ್ರೋಶಗೊಂಡು ಅರಣ್ಯ ಇಲಾಖೆಯ ಒಳಗಡೆ ಹೋಗಲು ಬಿಡಿ. ನಾವು ಶಾಂತಿಯುತವಾಗಿ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇವೆ. ನಾವು ಗಲಭೆ ಪ್ರಿಯರಲ್ಲ. ನೀವು ನಾಡಿಗೆ ಬಂದಾಗ ನಾವು ಸ್ವಾಗತಿಸಬೇಕು, ನಿಮ್ಮ ಕಚೇರಿಗೆ ನಾವು ೪ಐದನೇ ಪುಟಕ್ಕೆ

ಬಂದಾಗ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಡು ಪ್ರಾಣಿಗಳಿಂದ ರೈತರನ್ನು ಉಳಿಸಿ ಎಂದು ಘೋಷಣೆ ಕೂಗುತ್ತಾ ಪ್ರತಿಭಟಿಸಿದ ಬಿಜೆಪಿಗರು ರಾಜ್ಯ ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಡಿಎಫ್‌ಓ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.

ಗೇಟಿನ ಬಳಿಗೆ ಬಂದ ಡಿಎಫ್‌ಓ ಅವರ ಬಳಿ ಪ್ರತಿಭಟನಾಕಾರರೂ ಎಷ್ಟೇ ಕೇಳಿಕೊಂಡರೂ ಅರಣ್ಯ ಇಲಾಖೆಯ ಒಳಗಡೆ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ನಾವು ಶಾಂತಿಯುತವಾಗಿ ಮಾತನಾಡಿ, ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ವನ್ಯಜೀವಿಗಳ ಉಪಟಳದ ಬಗ್ಗೆ ನಮ್ಮ ಮನವಿ ಇದೆ. ನಮಗೆ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರೂ ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಅವರ ನೇತೃತ್ವದಲ್ಲಿ ಪೊಲೀಸರು ಮತ್ತು ಅರಣ್ಯ ಇಲಾಖೆಯವರು ಆಸ್ಪದ ನೀಡಲಿಲ್ಲ. ಕೇವಲ ನಾಲ್ಕು ಜನರಿಗೆ ಮಾತ್ರ ಅವಕಾಶ ಎಂದಾಗ ಆಕ್ರೋಶಿತರಾದ ಬಿಜೆಪಿಗರು ಗೇಟಿಗೆ ಅಳವಡಿಸಿದ ಬ್ಯಾರಿಕೇಡ್‌ನ್ನು ತಳ್ಳಿ ಅರಣ್ಯ ಇಲಾಖೆಯ ಆವರಣವನ್ನು ಪ್ರವೇಶಿಸಿದರು.

ಅರಣ್ಯ ಇಲಾಖೆ ಸುತ್ತ ಬಿಗಿ ಪೋಲಿಸ್ ಭದ್ರತೆಯನ್ನು ಮಾಡಿದ್ದು ಕುಳಿತು ಮಾತನಾಡಲು ಅವಕಾಶ ಕೊಡಿ ಎಂದರೂ ಬ್ಯಾರಿಕೇಡ್ ಅಳವಡಿಸಿ ಕಚೇರಿ ಒಳಗಡೆ ಪ್ರವೇಶಕ್ಕೆ ಅನುಮತಿಯನ್ನು ಅಧಿಕಾರಿಗಳು ನೀಡಲಿಲ್ಲ.

ಇದರಿಂದ ಕುಪಿತಗೊಂಡ ಬಿಜೆಪಿಗರು, ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ಕಲ್ಪಿಸಿಕೊಂಡು ಆಡಳಿತ ಪಕ್ಷದ ಕೈಗೊಂಬೆಯಾಗಿ ವರ್ತಿಸುವುದು ಬೇಡ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ವನ್ಯ ಪ್ರಾಣಿಗಳ ನಿಯಂತ್ರಣ ಸಾಧ್ಯವಿಲ್ಲ ಎಂದರೆ ಕೆಲಸಕ್ಕೆ ರಾಜೀನಾಮೆ ನೀಡಿ ತೆರಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಪ್ರಮುಖರು ಮಾತನಾಡಿ, ಇತ್ತೀಚೆಗೆ ಕರ್ನಾಟಕ ರಾಜ್ಯದ ಅರಣ್ಯ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಪೊನ್ನಂಪೇಟೆ ತಾಲೂಕಿನ ಬಿ. ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಬಗ್ಗೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ನೀಡಿರುವ ಭರವಸೆ ಹುಸಿಯಾಗಿದೆ. ಚುನಾವಣಾ ಸಮಯದಲ್ಲಿ ಶಾಸಕ ಪೊನ್ನಣ್ಣ ಆನೆ ಮಾನವ ಸಂಘರ್ಷ ತಡೆಗೆ ಆರು ತಿಂಗಳಲ್ಲಿ ಶಾಶ್ವತ ಪರಿಹಾರ ದೊರಕಿಸಿ ಕೊಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಿದ್ದರೂ ಈ ಭರವಸೆ ಹುಸಿಯಾಗಿದೆ. ಕಾಡು ಪ್ರಾಣಿಗಳ ರಕ್ಷಣೆ ಜೊತೆಗೆ ಆನೆಯಿಂದ ಬೆಳೆ ನಾಶ, ಹುಲಿ ದಾಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಈ ಬಾರಿ ಮನವಿ ಅಲ್ಲ, ಎಚ್ಚರಿಕೆ ನೀಡುತ್ತಿದ್ದೇವೆ. ಸರ್ಕಾರಕ್ಕೆ ಕಿಂಚಿತ್ತಾದರೂ ಮಾನವೀಯತೆ ಇದ್ದರೆ ರೈತರ ಸಮಸ್ಯೆಗೆ ಸ್ಪಂದಿಸಲಿ. ಕಾಡಾನೆ ಹಾವಳಿ ಇಡೀ ರಾಜ್ಯದ ಸಮಸ್ಯೆ. ಈ ಬಗ್ಗೆ ರಾಜ್ಯ ಸರ್ಕಾರ ಏನಾದರೂ ಯೋಚಿಸಿದೆಯೇ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ ಸುಜಾ ಕುಶಾಲಪ್ಪ ಮಾತನಾಡಿ ರೈಲ್ವೆ ಬ್ಯಾರಿಕೇಡ್‌ಗೆ ೨೨ ಕೋಟಿ ಅನುದಾನ ಬಂದಿದೆ ಎಂದು ನೀವು ಅಧಿಕಾರಿಗಳು ಹೇಳುತ್ತಿದ್ದೀರಾ ಅದರ ಸಂಪೂರ್ಣ ಮಾಹಿತಿಯನ್ನು ಕೊಡಬೇಕು. ಹೆಚ್ಚಿನ ಅನುದಾನಕ್ಕೆ ಸರಕಾರಕ್ಕೆ ಬೇಡಿಕೆ ಸಲ್ಲಿಸಬೇಕು. ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿಗಳಿಂದ ೩೨ ಜನ ಮೃತಪಟ್ಟಿದ್ದಾರೆ. ವಿಶೇಷವಾಗಿ ಕೊಡಗು ಜಿಲ್ಲೆ ಅರಣ್ಯ ಪ್ರದೇಶದಿಂದ ಕೂಡಿದ ಜಾಗವಾಗಿದ್ದು ಅರಣ್ಯ ಇಲಾಖೆಯ ಸಿಸಿಎಫ್ ಅವರ ಮೂಲಕ ಹೆಚ್ಚಿನ ಹಣಕಾಸಿಗೆ ಬೇಡಿಕೆ ಸಲ್ಲಿಸಿ ಅನುದಾನವನ್ನು ತರಬೇಕಾದದು ನಿಮ್ಮ ಕರ್ತವ್ಯ. ಆ ರೀತಿ ಮಾಡಿದರೆ ತಾನು ಖುದ್ದು ಮೇಲ್ಮನೆ ಕಲಾಪದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿ ಅರಣ್ಯ ಸಚಿವರ ಜೊತೆಗೂ ಪ್ರಸ್ತಾಪ ಮಾಡಿ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಮಾಜಿ ಶಾಸಕ ಕೆ.ಜಿ ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಚಿಮಾಡ ರವೀಂದ್ರ, ಕೇಳಪಂಡ ಸುಜು ನಾಣಯ್ಯ, ರೀನಾ ಪ್ರಕಾಶ್, ಸುವಿನ್ ಗಣಪತಿ ಪಕ್ಷದ ಇನ್ನಿತರ ಮುಖಂಡರುಗಳು ಮಾತನಾಡಿದರು.

ಈ ಸಂದರ್ಭ ಡಿಸಿಎಫ್ ಜಗನ್ನಾಥ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಡಿಸಿಎಫ್ ಜಗನ್ನಾಥ್ ಅವರು ನಿಮ್ಮ ಬೇಡಿಕೆಗಳ ಬಗ್ಗೆ ಮೇಲಾಧಿಕಾರಿಗಳ ಜೊತೆಯಲ್ಲಿ ಚರ್ಚೆ ಮಾಡಿ ಅವರ ಮಾರ್ಗದರ್ಶನದಂತೆ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಕಾಡಾನೆಗಳ ಹಾವಳಿ ತಡೆಗಟ್ಟಲು ಕೈಗೊಂಡಿರುವ ಕ್ರಮಗಳು ಹಾಗೂ ರೂಪಿಸಿರುವ ಯೋಜನೆಗಳ ಬಗ್ಗೆ ಪ್ರತಿಭಟನಾನಿರತರಿಗೆ ಮಾಹಿತಿ ನೀಡಿದರು. ಕೂಡಲೇ ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಆರಂಭಿಸುವುದಾಗಿ ಭರವಸೆ ನೀಡಿದರು.

ವನ್ಯಪ್ರಾಣಿಗಳಿಗಾಗಿ, ಅರಣ್ಯ ಪ್ರದೇಶಗಳ ಒಳಗೆ ನೀರಿನ ಲಭ್ಯತೆ ಹೆಚ್ಚಿಸಲು ರಕ್ಷಿತಾರಣ್ಯಗಳಲ್ಲಿ ಕೆರೆಗಳ ನಿರ್ಮಾಣ ಹಾಗೂ ಪುನಶ್ಚೇತನಗೊಳಿಸಿ ವನ್ಯಪ್ರಾಣಿಗಳ ಆವಾಸ ಸ್ಥಾನವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಇದರಿಂದ ಕಾಡಾನೆ ಹಾಗೂ ಇತರ ವನ್ಯಪ್ರಾಣಿಗಳು ಕಾಡಿನಿಂದ ಹೊರಗೆ ಬಾರದಂತೆ ತಡೆಯಲಾಗುತ್ತಿದೆ.

ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ಮಣ ಹಾಗೂ ನಿರ್ವಹಣೆ ಮಾಡಲಾಗಿದ್ದು ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ನಮ್ಮ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಈಡೇರಿಸಬೇಕು. ತಪ್ಪಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವೀರಾಜಪೇಟೆ ಮಂಡಲ ಪ್ರ.ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ, ಕಾರ್ಯದರ್ಶಿ ಮುದ್ದಿಯಂಡ ಮಂಜು, ವೀರಾಜಪೇಟೆ ನಗರ ಅಧ್ಯಕ್ಷ ಅನಿಲ್ ಮಂದಣ್ಣ, ಮಾಜಿ ಜಿಲ್ಲಾ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ವಾಟೇರಿರ ಬೋಪಣ್ಣ, ಕಾನೂನು ಸಲಹೆಗಾರ ಪುಲಿಯಂಡ ಪೊನ್ನಣ್ಣ, ಮಾಚಿಮಂಡ ವಸಂತ, ಮಲ್ಲಂಡ ಮಧು, ಶಶಿ ಸುಬ್ರಮಣಿ, ಕೂತಂಡ ಸಚಿನ್, ವಾಟೇರಿರ ವಿರಜ್, ಕಾಂತಿ ಸತೀಶ್, ಬೊಪ್ಪಂಡ ಸುನಿತಾ(ಜೂನ) ಪಿ.ಜಿ. ಸುಮೇಶ್, ಚಕ್ಕೆರ ಸೂರ್ಯ, ಅಚ್ಚಪಂಡ ಮಹೇಶ್, ಅಭಿಜಿತ್, ಯಮುನಾ ಚಂಗಪ್ಪ, ರಘು ನಾಣಯ್ಯ, ಪಕ್ಷದ ಇನ್ನಿತರ ಮುಖಂಡರುಗಳು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.