ಚೆಯ್ಯಂಡಾಣೆ, ಏ. ೨೮: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಹಾಗೂ ಕೊಕೇರಿ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಫಸಲುಗಳನ್ನು ನಾಶಪಡಿಸಿ ನಷ್ಟ ಉಂಟುಮಾಡಿದೆ.
ಚೇಲಾವರ ಗ್ರಾಮದ ಮುಂಡ್ಯೋಳAಡ ದರ್ಶನ್ ನಾಚಪ್ಪ ಹಾಗೂ ಮುಂಡ್ಯೋಳAಡ ಕುಟುಂಬಸ್ಥರ ತೋಟಗಳಿಗೆ ಹಾಗೂ ಕೋಕೇರಿ ಗ್ರಾಮದ ಮಚ್ಚಂಡ ಸುಮತಿ ಕುಂಞಪ್ಪ ಹಾಗೂ ಮತ್ತಿತರರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕಾಫಿ, ಬಾಳೆ, ಅಡಿಕೆ ಹಾಗೂ ಮನೆ ಸಮೀಪದಲ್ಲಿ ಬೆಳೆದಿದ್ದ ಹಣ್ಣಿನ ಗಿಡಗಳನ್ನು ನಾಶಪಡಿಸಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಈ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಹಾವಳಿಯಿಂದ ಕಾರ್ಮಿಕರು ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಓಡಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಹಲವಾರು ಬಾರಿ ಕಾಡಾನೆ ಈ ವ್ಯಾಪ್ತಿಯ ರೈತರ ಹಾಗೂ ಕಾರ್ಮಿಕರ ಮೇಲೆ ದಾಳಿ ನಡೆಸಿದ್ದು, ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಫಸಲು ನಷ್ಟ ಹೊಂದಿದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.