ಸಿದ್ದಾಪುರ, ಏ. ೨೮: ಕಾಡಾನೆ ದಾಳಿಗೆ ಗಬ್ಬದ ಹಸು ಬಲಿಯಾದ ಘಟನೆ ನೆಲ್ಲಿಹುದಿಕೇರಿಯಲ್ಲಿ ನಡೆದಿದೆ.
ನೆಲ್ಲಿಹುದಿಕೇರಿ ಗ್ರಾಮದ ಶಾಲೆ ರಸ್ತೆಯ ಸಮೀಪ ವಾಸವಿರುವ ಕೆ.ಪಿ. ಶೇಖರ್ ಎಂಬವರಿಗೆ ಸೇರಿದ ಎಂಟು ತಿಂಗಳ ಗಬ್ಬದ ಹಸುವನ್ನು ಮನೆ ಹಿಂಭಾಗದ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿತ್ತು. ತಡರಾತ್ರಿ ಕಾಫಿ ತೋಟಗಳಿಂದ ಬಂದ ಕಾಡಾನೆ ಹಸುವಿನ ಮೇಲೆ ದಾಳಿ ನಡೆಸಿದ ಪರಿಣಾಮ ಹಸು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಈ ಬಗ್ಗೆ ಹಸುವಿನ ಮಾಲೀಕ ಶೇಖರ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ಕುಶಾಲನಗರ ವಲಯದ ಮೀನುಕೊಲ್ಲಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಸಚಿನ್ ನಿಂಬಾಳ್ಕರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಎರಡು ದಿನಗಳ ಹಿಂದೆ ಈ ಭಾಗದ ಕಾಫಿ ತೋಟಗಳಲ್ಲಿ ಮೂರು ಕಾಡಾನೆಗಳು ಸುತ್ತಾಡುತ್ತಿದ್ದವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದಾಗಿ ಗ್ರಾಮಸ್ಥರು ಮತ್ತು ಕಾರ್ಮಿಕರು ಭಯ ಭೀತರಾಗಿದ್ದಾರೆ. ಗ್ರಾಮದ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧÀಲೆ ನಡೆಸುತ್ತಿರುವ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ಕಾರ್ಮಿಕ ಮುಖಂಡ ಪಿ.ಆರ್. ಭರತ್ ಒತ್ತಾಯಿಸಿದ್ದಾರೆ.