ಮಡಿಕೇರಿ, ಏ. ೨೮: ಕೊಡಗು ಜಿಲ್ಲಾ ಬಂಟರ ಭವನ ಟ್ರಸ್ಟ್ ಮತ್ತು ಜಿಲ್ಲಾ ಬಂಟರ ಸಂಘದ ವತಿಯಿಂದ ಮೇ ೧ ರಂದು ಕೊಡಗು ಬಂಟರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಬಿ.ಡಿ ಜಗದೀಶ್ ರೈ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಸುಸಜ್ಜಿತವಾದ ಬಂಟರ ಭವನ ನಿರ್ಮಾಣವಾಗಬೇಕೆಂಬುದು ಸಮುದಾಯ ಬಾಂಧವರ ಹಲವು ವರ್ಷಗಳ ಕನಸಾಗಿತ್ತು. ಇದೀಗ ಕನಸು ನನಸಾಗುತ್ತಿದೆ, ಅಬ್ಬಿಫಾಲ್ಸ್ ರಸ್ತೆಯಲ್ಲಿರುವ ಟ್ರಸ್ಟ್ ನಿವೇಶನದಲ್ಲಿ ಮೇ ೧ ರಂದು ಬೆಳಿಗ್ಗೆ ೧೧ ಗಂಟೆಗೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ ಎಂದರು. ಇತ್ತೀಚೆಗೆ ನಿಧನರಾದ ಸಮಾಜದ ಹಿರಿಯರು, ದಾನಿಗಳಾದ ಡಾ.ಪ್ರೇಮನಾಥ್ ಪೂಂಜಾ ಅವರು ಭವನ ನಿರ್ಮಾಣಕ್ಕಾಗಿ ೫೨ ಸೆಂಟ್ ಜಾಗವನ್ನು ದಶಕದ ಹಿಂದೆಯೇ ನೀಡಿದ್ದರು. ಕಾರಣಾಂತರಗಳಿAದ ಕಾಮಗಾರಿ ಆರಂಭಿಸುವುದು ವಿಳಂಬವಾಯಿತು. ಇದೀಗ ಮಹತ್ಕಾರ್ಯಕ್ಕೆ ಕಾಲ ಕೂಡಿ ಬಂದಿದೆ ಎಂದು ಹೇಳಿದರು.

ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ, ಸಂಸದರುಗಳಾದ ಯದುವೀರ್ ಒಡೆಯರ್, ಕ್ಯಾ. ಬ್ರಿಜೇಶ್ ಚೌಟ, ಎಂಎಲ್‌ಸಿ ಸುಜಾ ಕುಶಾಲಪ್ಪ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ ಬೋಪಯ್ಯ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ಡಾ.ಪ್ರೇಮನಾಥ್ ಪೂಂಜ ಅವರಿಗೆ ಮರಣೋತ್ತರವಾಗಿ ಬಿರುದು ಪ್ರದಾನ ಮಾಡಲಾಗುವುದು. ಕಾರ್ಯಕ್ರಮಕ್ಕೆ ೨ ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ತಾ.೩೦ರಿಂದ ಮೇ ೩ರವರೆಗೆ ಕೊಡಗು ಯುವ ಬಂಟ್ಸ್ ವತಿಯಿಂದ ಬಂಟರ ಭವನ ನಿವೇಶನದ ಪಕ್ಕದಲ್ಲಿರುವ ಮೈದಾನದಲ್ಲಿ ಕ್ರೀಡಾಕೂಟ ಏರ್ಪಡಿಸಲಾಗಿದೆ. ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ, ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ, ಉಪಾಧ್ಯಕ್ಷ ಬಿ.ಎಸ್ ಸದಾಶಿವ ರೈ, ಕಾರ್ಯದರ್ಶಿ ರವೀಂದ್ರ ರೈ, ಬಂಟರ ಭವನ ಟ್ರಸ್ಟ್ ಕಾರ್ಯದರ್ಶಿ ಅಪ್ಪು ಬಾಲಕೃಷ್ಣ ರೈ, ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ ಸದಾನಂದ ರೈ ಹಾಜರಿದ್ದರು.