ಮಡಿಕೇರಿ, ಏ. ೨೮: ಕೆಲವೊಂದು ಔಷಧಿಗಳನ್ನು ನೀಡುವ ಸಂದರ್ಭ ಕಡ್ಡಾಯವಾಗಿ ವೈದ್ಯರು ನೀಡುವ ಚೀಟಿಯನ್ನು ಪಡೆದು ನಂತರವಷ್ಟೆ ಔಷಧಿಯನ್ನು ಗ್ರಾಹಕರಿಗೆ ಮಾರಾಟ ಮಾಡಬೇಕೆಂದು ಜಿಲ್ಲಾಧಿಕಾರಿ ಸೋಮಶೇಖರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಮೆಡಿಕಲ್ಸ್ ಮಾಲೀಕರಿಗೆ ಸೂಚಿಸಿದರು. ನಗರದ ಮೆಡಿಕಲ್ ಸ್ಟೋರ್‌ಗಳಿಗೆ ತೆರಳಿದ ಅಧಿಕಾರಿಗಳು ಈ ಕುರಿತು ಸೂಚನ ಫಲಕ ಅಳವಡಿಸಲಾಗಿದೆಯೆ ಎಂಬುದರ ಕುರಿತು ಪರಿಶೀಲನೆ ನಡೆಸಿದರು. ಅಮಲು ಬರುವ ಔಷಧಿಗಳನ್ನು ಗ್ರಾಹಕರು ಕೇಳಿದ ಸಂದರ್ಭ ಕಡ್ಡಾಯವಾಗಿ ವೈದ್ಯರ ಚೀಟಿಯನ್ನು ಪರಿಶೀಲಿಸಬೇಕು. ಅಲ್ಲದೆ, ಈ ಕುರಿತು ಸೂಚನ ಫಲಕಗಳನ್ನು ಮೆಡಿಕಲ್ಸ್ಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕೆಂದು ತಿಳಿಸಲಾಗಿದೆ ಎಂದು ಎಸ್‌ಪಿ ಬಿಂದುಮಣಿ ತಿಳಿಸಿದ್ದಾರೆ.