ಭಾರತೀಯ ಸಂಸ್ಕೃತಿಯಲ್ಲಿ ನೃತ್ಯಕ್ಕೆ ವಿಶಿಷ್ಟ ಸ್ಥಾನಮಾನಗಳಿರುವುದನ್ನು ನಾವು ಗಮನಿಸಬಹುದು. ಭಾರತ ದೇಶದ ಉದ್ದಗಲಗಳಲ್ಲಿ ಹರಡಿರುವ ದೇವಾಲಯಗಳಲ್ಲಿ ಕೆತ್ತಿರುವ ಶಿಲಾಬಾಲಿಕೆಯರ ನೃತ್ಯದ ಹಲವು ಭಂಗಿಗಳು ಇದಕ್ಕೆ ಉತ್ತಮ ಉದಾಹರಣೆಯಾಗಬಹುದು.ಬೇಲೂರು ಹಳೇಬೀಡುವಿನ ಶಿಲೆಗಳಲ್ಲಿ ಕೆತ್ತಿದ ನರ್ತಕಿಯರ ನಾನಾ ಭಂಗಿಗಳ ನೃತ್ಯಗಳು, ಚಿದಂಬರಮ್‌ನ ನಟರಾಜನ ನೃತ್ಯ, ಹಂಪಿಯ ಹಝರರಾಮ ದೇವಾಲಯ, ಮೈಸೂರು ಸಮೀಪದ ಸೋಮೇಶ್ವರ ದೇವಾಲಯದಲ್ಲಿ ನರ್ತಕಿಯರ ನಟನಾ ಕೆತ್ತನೆಗಳು, ಮಧ್ಯಪ್ರದೇಶದ ಕಜುರಾಹೋದ ವಿಶ್ವಪ್ರಸಿದ್ಧ ದೇಗುಲಗಳಲ್ಲಿ ಕೆತ್ತಿದ ನಾಟ್ಯಭಂಗಿಗಳು, ತಂಜಾವೂರಿನ ಬೃಹದಿಶ್ವರ ದೇಗುಲ, ಕುಂಬಕೋಣಮ್‌ನ ಸಾರಂಗಪತಿ ದೇವಾಲಯ ಹೀಗೆ ಎಣಿಕೆಗೂ ಮೀರದಷ್ಟು ನೃತ್ಯದ ನಾನಾ ಭಂಗಿಗಳು ಈ ದೇವಾಲಯಗಳಲ್ಲಿದ್ದು ಇವು ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ನೃತ್ಯದ ಮಹತ್ವವನ್ನು ವಿವರಿಸಲು ಪ್ರತಿವರ್ಷ ಏಪ್ರಿಲ್ ೨೯ ರಂದು ವಿಶ್ವ ನೃತ್ಯ ದಿವಸವೆಂದು ಆಚರಿಸಲಾಗುತ್ತದೆ.
ವಿಶ್ವ ನೃತ್ಯದಿವಸವನ್ನು ಮೊದಲು ಅಂತಾರಾಷ್ಟಿçÃಯ ನೃತ್ಯ ಸಮಿತಿಯು ೧೯೮೨ರ ಏಪ್ರಿಲ್ ೨೯ರಂದು ಆಚರಿಸಲು ತೀರ್ಮಾನಿಸಿತು. ಆಧುನಿಕ ಬಾಲೆ ನೃತ್ಯದ ಆವಿಷ್ಕಾರವನ್ನು ಮಾಡಿದ ಜೀನ್ ಜರ‍್ಜೆಸ್ ನೋವೆರೆ ಎನ್ನುವ ನೃತ್ಯಗಾರ್ತಿಯ ಹುಟ್ಟುಹಬ್ಬದ ದಿನವನ್ನು ನೆನಪಿಸಲು ಈ ದಿನವನ್ನು ಸರ್ವಾನುಮತದಿಂದ ಆರಿಸಲಾಯಿತು. ಈ ದಿವಸದಂದು ವಿಶ್ವದ ನೃತ್ಯಕಲಾವಿದರ ನೃತ್ಯದ ಬಗ್ಗೆ ಮಾಹಿತಿಯನ್ನು ವಿಶ್ವಕ್ಕೆ ಪರಿಚಯಿಸಲು ಹಾಗೂ ಜಗತ್ತಿಗೆ ನೃತ್ಯದ ಮಹತ್ವವನ್ನು ಅರ್ಥಮಾಡಿಸಲು ನೃತ್ಯಗಾರರಿಗೆ ಒಂದು ವೇದಿಕೆಯನ್ನು ಒದಗಿಸುತ್ತದೆ. ಈ ದಿವಸದಂದು ಅಂತರರಾಷ್ಟಿçÃಯ ನೃತ್ಯ ಸಮಿತಿಯು ವಿವಿಧ ರೀತಿಯ ನೃತ್ಯಗಳ ಕಲಾವಿದರಿಗೆ ಅಧಿಕೃತವಾಗಿ ನೃತ್ಯದ ಬಗ್ಗೆ ಒಂದು ಸಂದೇಶ ಸಾರಲು ಅವಕಾಶವನ್ನು ನೀಡಿ ಈ ಸಂದೇಶವನ್ನು ವಿಶ್ವದಾದ್ಯಂತ ಹಂಚಿಕೊಳ್ಳಲಾಗುತ್ತದೆ.
ಭಾರತದಲ್ಲಿ ನೃತ್ಯಗಳನ್ನು ಮುಖ್ಯವಾಗಿ ಸಾಂಪ್ರದಾಯಿಕ ಮತ್ತು ಜಾನಪದ ನೃತ್ಯಗಳೆಂದು ವಿಭಜಿಸಲಾಗಿದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ತನ್ನದೇ ಆದ ನೃತ್ಯಶೈಲಿಗಳಿವೆ. ಅವುಗಳಲ್ಲಿ ಶಾಸ್ತಿçÃಯ ನೃತ್ಯಗಳು ಬಹಳ ಗೌರವಕ್ಕೂ ಹೆಸರಿಗೂ ಭಾಜನವಾಗಿವೆ. ತಮಿಳುನಾಡು ಮೂಲದ ಭರತನಾಟ್ಯವೆನ್ನುವುದು ಕೈ, ಮುಖ ಮತ್ತು ಪಾದಗಳ ಚಲನೆಯನ್ನು ಪ್ರಧಾನವಾಗಿರಿಸಿಕೊಂಡ ನೃತ್ಯವಾಗಿದ್ದು ಹಿಂದೂ ದೈವಗಳ ಮೇಲಿನ ನಂಬುಗೆಯನ್ನು ಇದು ಪ್ರತಿನಿಧಿಸುತ್ತದೆ. ಉತ್ತರಪ್ರದೇಶದ ಕಥಕ್ ನೃತ್ಯಾವಳಿಯು ಭಾರತದ ಮತ್ತೊಂದು ಪ್ರಮುಖ ನೃತ್ಯವಾಗಿದ್ದು ಇದು ಪಾದಗಳ ತೀವ್ರಚಲನೆಯ ನೃತ್ಯವಾಗಿದ್ದು ಹಿಂದೂಗಳ ನಂಬಿಕೆ, ಇತಿಹಾಸ ಮತ್ತು ಬರವಣಿಗೆಗಳನ್ನು ತಿಳಿಸುವುದು. ಒರಿಸ್ಸಾ ದೇಶದ ಒಡಿಸ್ಸಿ ನೃತ್ಯವೂ ಒಂದು ಜನಮೆಚ್ಚಿಗೆ ನೃತ್ಯದ ಪ್ರಕಾರವಾಗಿದೆ.ಆಂಧ್ರಪ್ರದೇಶದ ಕೂಚಿಪುಡಿ ನೃತ್ಯ, ಕೇರಳದ ಕಥಕ್ಕಳಿ, ಮಣಿಪುರಿಯ ಮಣಿಪುರಿ ನೃತ್ಯ, ಕೇರಳದ ಮೋಹಿನಿಯಾಟ್ಟಮ್, ಅಸ್ಸಾಮಿನ ಸತ್ರಿಯಾ, ಪಂಜಾಬಿನ ಭಾಂಗ್ರಾ ಎನ್ನುವ ನೃತ್ಯ, ಮಹಾರಾಷ್ಟçದ ಲಾವಣಿ ಹಾಗೂ ತಮಾಶಾನೃತ್ಯಗಳು ಮೊದಲಾದವು ಭಾರತದ ಪ್ರಮುಖ ನೃತ್ಯಶೈಲಿಗಳಾಗಿವೆ. ಇದರೊಂದಿಗೆ ಗುಜರಾತಿನಲ್ಲಿ ನವರಾತ್ರಿಯ ಸಮಯದಂದು ಬೀದಿಬೀದಿ ಗಳಲ್ಲಿ ಮಾಡುವ ಗರ್ಭಾನೃತ್ಯವೂ ಜನಾಕರ್ಷಕ ವಾಗಿವೆ.
ಯಕ್ಷಗಾನದಲ್ಲಿಯೂ “ತಕಿಟ ತಕದಿಮಿ” ಎನ್ನುವ ತಾಳಕ್ಕೆ ತಕ್ಕಂತೆ ಹೆಜ್ಜೆಯಿಡುತ್ತ ನಟಿಸುವ ಕಲಾವಿದರನ್ನು ಕಾಣಬಹುದು. ಇಲ್ಲಿ ಕಲಾವಿದರು ಧಾರಾಳವಾಗಿ ಬಣ್ಣ ಬಳಿದುಕೊಂಡು ಕಾಲಿಗೆ ಗೆಜ್ಜೆಯನ್ನು ಕಟ್ಟಿಕೊಂಡು ನಿರೂಪಕರು ಹಾಡುವ ಹಾಡಿಗೆ ಸರಿಯಾಗಿ ಹೆಜ್ಜೆಯನ್ನು ಹಾಕಿ, ಕಣ್ಣುಗಳನ್ನು ಅತ್ತಿತ್ತ ಆಡಿಸುತ್ತ ನೃತ್ಯವನ್ನು ಮಾಡುವರು.ಡೊಳ್ಳುಕುಣಿತ, ಹುಲಿವೇಶ, ವೀರಗಾಸೆ, ಕೋಲಾಟ ಮೊದಲಾದವು ಕರ್ನಾಟಕದ ಹಲವು ಪ್ರಮುಖ ನೃತ್ಯಪ್ರಕಾರಗಳಾಗಿವೆ.
ಕೊಡಗು ಜಿಲ್ಲೆಯಲ್ಲಿಯೂ ಇವೆಲ್ಲವನ್ನೂ ಮೀರಿಸುವಂತೆ ಕಲಾವಿದರು ಜಾನಪದ ನೃತ್ಯದ ಶ್ರೀಮಂತಿಕೆಯನ್ನು ಹೊಂದಿದವರು..ಇಲ್ಲಿನ ಕೋಲಾಟ, ಬೊಳಕಾಟಗಳ ವೈಶಿಷ್ಟö್ಯಗಳು ದೇಶದ ಎಲ್ಲೆಡೆಯಲ್ಲಿಯೂ ಮನೆಮಾತಾಗಿವೆ. ಹುತ್ತರಿ ಹಬ್ಬದ ಸಂದರ್ಭದಲ್ಲಿ ಅಂಬಲದಲ್ಲಿ, ನಾಡ್‌ಮಂದ್‌ನಲ್ಲಿ ಊರು ಮಂದ್‌ನಲ್ಲಿಯೂ ಸಾಂಪ್ರದಾಯಿಕ ಉಡುಪನ್ನು ಧರಿಸಿ ನಡೆಸುವ ನೃತ್ಯಗಳು ಕಣ್ಣಿಗೆ ಹಬ್ಬವಾಗಿಬಿಡುತ್ತವೆ. ಕೊಡಗು ಜಿಲ್ಲೆಯ ಕೆಲವು ಸಮುದಾಯಗಳಲ್ಲಿ ಮದುವೆಯ ಸಂದರ್ಭಗಳಲ್ಲಿ ಹೊಡೆಯುವ ಚಂಡೆಯ ಅಥವಾ ತಮಟೆಯ ಧ್ವನಿಗೆ ಅನುಗುಣವಾಗಿ ಎಲ್ಲ ಆಹ್ವಾನಿತರೂ ಹೆಜ್ಜೆಯನ್ನು ಇರಿಸುತ್ತ ತಮಗಾದ ಸಂತೋಷವನ್ನು ವ್ಯಕ್ತಪಡಿಸುವರು, ಮದುವೆಗೆ ಕಳೆಯನ್ನೇರಿಸುವರು. ನೃತ್ಯದ ಭಾವನೆಗಳು ಮತ್ತು ಅಂಗಾAಗಗಳ ಬಳುಕುವಿಕೆಯು ನರ್ತಕರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನೂ ಕಾಪಾಡುವುದು.
ಇಂದ್ರನ ಆಸ್ಥಾನದಲ್ಲಿ ರಂಭೆ, ಮೇನಕೆ, ತಿಲೋತ್ತಮೆಯರೆಲ್ಲ ಕೂಡಿ ನೃತ್ಯವನ್ನು ಮಾಡಿ ಆಸ್ಥಾನದ ಇತರ ಸಭಿಕರನ್ನು ಖುಷಿಪಡಿಸುತ್ತಿದ್ದರಂತೆ. ಈಶ್ವರನ ತಾಂಡವನೃತ್ಯವು ಭಾರತದಲ್ಲಿ ಮಾತ್ರವಲ್ಲ, ಇತರ ದೇಶಗಳಲ್ಲಿಯೂ ಹೆಸರನ್ನು ಪಡೆದಿದೆ. ನಟವರ ಗಂಗಾಧರ ಉಮಾಶಂಕರನೆAಬ ಬಿರುದೂ ಶಿವನಿಗೆ ಹೀಗೆ ಲಭ್ಯವಾಗಿದೆ. ಹಿಂದೆ ಮಹಾರಾಜರು ತಮ್ಮ ಆಸ್ಥಾನಗಳಿಗೆ ಬರುವ ಅತಿಥಿಗಳನ್ನು ಮತ್ತಿತರ ಗಣ್ಯರನ್ನು ಮೆಚ್ಚಿಸಲು ನೃತ್ಯವನ್ನು ನರ್ತಕಿಯರಿಂದ ಮಾಡಿಸುತ್ತಿದ್ದರು. ಹಲವು ಸಭೆ ಸಮಾರಂಭಗಳಲ್ಲಿ ಈಗಲೂ ಕಾರ್ಯಕ್ರಮಗಳ ನಡುವೆ ನೃತ್ಯವನ್ನು ಮಾಡಿಸಿ ಪ್ರೇಕ್ಷಕರನ್ನು ಮುದಗೊಳಿಸುವ ಪದ್ಧತಿಯು ಇದೆ.
ಹೀಗೆ ಹಾವಭಾವಗಳ ಮೂಲಕ ತಾಳಮೇಳಕ್ಕೆ ಸರಿಯಾಗಿ ಹೆಜ್ಜೆಯನ್ನು ಇಡುವ ನೃತ್ಯವು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಒತ್ತಡಗಳಿಗೆ ಬಿದ್ದು ಖಿನ್ನತೆಗೋ ಮಾನಸಿಕ ಬಳಲಿಕೆಗೋ ಸಿಲುಕಿ ನಲುಗುವ ಇಂದಿನ ಪೀಳಿಗೆಗೆ ಒಂದು ವರದಾನವೂ ಆಗಬಲ್ಲುದು.
-ಕಿಗ್ಗಾಲು ಎಸ್ ಗಿರೀಶ್,
ಮೂರ್ನಾಡು,
ಮೊ: ೯೧೪೧೩೯೫೪೨೬