ಮಡಿಕೇರಿ, ಏ. ೨೮: ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರ ಲೇಖನ ‘ಕೊಡಗಿನ ಆಟಿ ತಿಂಗಳ ಆಚರಣೆಯ ಅಚ್ಚರಿಗಳು’ ಆದಿಚುಂಚನಗಿರಿ ವಿಶ್ವವಿದ್ಯಾಲಯ ಬಿಎಸ್‌ಎಸ್ಸಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ.
ಬಿಎಸ್‌ಸ್ಸಿ ‘ನ್ಯಾಚುರಲ್ ಸೈನ್ಸ್’ ವಿಭಾಗದಲ್ಲಿ ಈ ಲೇಖನವನ್ನು ವಿದ್ಯಾರ್ಥಿಗಳು ಅಭ್ಯಾಸ ನಡೆಸಲಿದ್ದಾರೆ. ಕುವೆಂಪು, ನೇಮಿಚಂದ್ರ, ನಿಸಾರ್ ಆಹಮ್ಮದ್, ಬರಗೂರು ರಾಮಚಂದ್ರಪ್ಪ ಅವರ ಲೇಖನಗಳೊಂದಿಗೆ ಐತಿಚಂಡ ರಮೇಶ್ ಉತ್ತಪ್ಪ ಅವರ ಲೇಖನವೂ ಆಯ್ಕೆಯಾಗಿರುವುದು ವಿಶೇಷವಾಗಿದೆ. ಲೇಖನ ವಿಭಾಗದಲ್ಲಿ ನೇಮಿಚಂದ್ರ ಅವರ ‘ನಾಸ ಗೆರೆಗಳ ಮೇಲೆ’, ಐತಿಚಂಡ ರಮೇಶ್ ಉತ್ತಪ್ಪ ಅವರ ‘ಆಟಿ ತಿಂಗಳ ಆಚರಣೆಯ ಅಚ್ಚರಿಗಳು’, ಬರಗೂರು ರಾಮಚಂದ್ರಪ್ಪ ಅವರ ‘ಬೆಂಗಳೂರು ನಗರವೆಂಬ ಒಂದು ಹಳ್ಳಿ’ ಎನ್ನುವ ಲೇಖನಗಳಿವೆ. ಕೊಡಗಿನ ಆಟಿ ತಿಂಗಳಲ್ಲಿನ ಆಚರಣೆಗಳು ಹಾಗೂ ಅದರ ಹಿಂದಿನ ವೈಜ್ಞಾನಿಕ ಸತ್ಯದ ಕುರಿತು ಲೇಖನದಲ್ಲಿ ವಿವರಗಳಿವೆ.
ಐತಿಚಂಡ ರಮೇಶ್ ಉತ್ತಪ್ಪ ಅವರು ಇಲ್ಲಿಯವರೆಗೆ ೪೦ ಅಧ್ಯಯನ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಜಾನಪದ ಹಾಗೂ ಇತಿಹಾಸದಲ್ಲಿ ದ್ವಿ ಸ್ನಾತಕೋತ್ತರ ಪದವಿ ಪಡೆದಿದ್ದು, ಮನಶಾಸ್ತ್ರವನ್ನು ವಿಶೇಷವಾಗಿ ಅಧ್ಯಯನ ನಡೆಸಿದ್ದಾರೆ. ಅವರ ಹಲವು ಕೃತಿಗಳು ಮನಶಾಸ್ತç ಹಾಗೂ ಮನೋವೈಜ್ಞಾನಿಕ ಅಂಶಗಳನ್ನು ಒಳಗೊಂಡಿವೆ. ಆನೆಗಳ ಕುರಿತು ೧೦ ಕೃತಿಗಳನ್ನು ರಚಿಸಿದ್ದಾರೆ. ‘ಆಟಿ ತಿಂಗಳ ಆಚರಣೆಯ ಅಚ್ಚರಿಗಳು’ ಲೇಖನದ ಕೆಲವು ಭಾಗ ಈ ಹಿಂದೆ ಅವರು ಶಕ್ತಿ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನದಲ್ಲಿ ಪ್ರಕಟವಾಗಿವೆ.