ಮಡಿಕೇರಿ, ಏ.೨೭; ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟç ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಮೂಲಕ ನೀಡಲಾಗಿದ್ದ ರಾಷ್ಟçವ್ಯಾಪಿ ಬಂದ್ ಕರೆಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಕೆಲವು ಮಾರಾಟ ಮಳಿಗೆಗಳು ಸಂಪೂರ್ಣ ಬಂದ್ ಆಗಿದ್ದರೆ, ಇನ್ನೂ ಕೆಲವು ಅರ್ಧಂಬರ್ಧ ತೆರದುಕೊಂಡಿದ್ದರೆ ಕೆಲವು ಸಂಪೂರ್ಣ ತೆರೆದುಕೊಂಡಿದ್ದುದು ಗೋಚರಿಸಿತು.

ಕೃಷಿ ಪರಿಕರಗಳ ಮಾರಾಟದ ಮೇಲೆ ಸರಕಾರ ಹೇರಿರುವ ನಿಯಮಗಳನ್ನು ಸಡಿಲಿಸುವದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇಂದು ಬಂದ್‌ಗೆ ಕರೆ ನೀಡಲಾಗಿತ್ತು. ಅದರಂತೆ ಕೊಡಗು ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಮೂಲಕ ಬಂದ್‌ಗೆ ಬಂಬಲ ವ್ಯಕ್ತಪಡಿಸಿ ಸಾಂಕೇತಿಕವಾಗಿ ಒಂದು ದಿವಸದ ಶಾಂತಿಯುತ ಬಂದ್ ಆಚರಿಸಲಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೆಲವು ಮಳಿಗೆಗಳು ಸಂಪೂರ್ಣವಾಗಿ ಬಂದ್ ಮಾಡಿ ಬೆಂಬಲ ಸೂಚಿಸಿದರೆ, ಇನ್ನೂ ಕೆಲವು ಮಳಿಗೆಗಳು ಮಧ್ಯಾಹ್ನದ ಬಳಿಕ ತೆರೆದುಕೊಂಡವು. ಕೆಲವು ಮಳಿಗೆಗಳು ಬೆಳಿಗ್ಗೆಯಿಂದಲೇ ಪೂರ್ಣವಾಗಿ ತೆರೆದುಕೊಂಡಿದ್ದವು.

ಮನವಿ ಸಲ್ಲಿಕೆ

ಡಿಎಪಿ ಮತ್ತು ಯೂರಿಯಾದ ಜೊತೆಗೆ ಇತರ ಉತ್ಪನ್ನಗಳನ್ನು ಲಿಂಕ್ ಮಾಡುವದನ್ನು ನಿಲ್ಲಿಸಬೇಕು, ಎಲ್ಲ ರಸಗೊಬ್ಬರಗಳ ದರದ ಮೇಲೆ ಶೇ.೮ರಷ್ಟು ಮಾರಾಟಗಾರರ ಲಾಭಾಂಶ ಇರುವ ಹಾಗೆ ನೋಡಿಕೊಳ್ಳಬೇಕು. ಎಲ್ಲ ರಸಗೊಬ್ಬರಗಳನ್ನು ಎಫ್‌ಒಎಲ್ ಕೊಡುವ ಹಾಗೆ ಕ್ರಮ ಕೈಗೊಳ್ಳಬೇಕು. ಗೊಬ್ಬರ, ಬೀಜ, ಕೀಟನಾಶಕಗಳ ಸ್ಯಾಂಪಲ್ ಕಳಪೆ ಬಂದಾಗ ಕಂಪೆನಿಯವರ ಮೇಲೆ ಮಾತ್ರ ಕ್ರಮ ಕೈಗೊಂಡು ಮಾರಾಟಗಾರರನ್ನು ಸಾಕ್ಷಿಯಾಗಿ ಪರಿಗಣಿಸಬೇಕು. ಅಧಿಕಾರಿಗಳು ತಪಾಸಣೆಗಾಗಿ ಅಂಗಡಿಗೆ ಭೇಟಿ ಕೊಟ್ಟಾಗ ಮಾಧ್ಯಮಗಳಿಗೆ ದಾಳಿ ಎನ್ನುವ ಪದವನ್ನು ಬಳಸಿ ಫೋಟೋ ಹಾಕಿ ಹೇಳಿಕೆ ನೀಡಬಾರದು. ಎಫ್‌ಐಡಿ ಮುಖಾಂತರ ರಸಗೊಬ್ಬರ ಮಾರಾಟ ಮಾಡುವ ಆದೇಶ ಸ್ವಾಗತಾರ್ಹ, ಹಾಗೆಯೇ ನೀರಾವರಿ ಮತ್ತು ಒಣ ಬೇಸಾಯಗಾರರಿಗೆ ಬೆಳೆಗಳ ಆಧಾರದ ಮೇಲೆ ರಸಗೊಬ್ಬರ ದೊರೆಯುವ ಹಾಗೆ ನೋಡಿಕೊಳ್ಳಬೇಕು. ಎಫ್‌ಐಡಿ ಮುಖಾಂತರ ಡಿಎಪಿ ಮತ್ತು ಯೂರಿಯಾ ಮಾರಾಟ ಮಾಡುವದನ್ನು ಹಿಂಗಾರು ಬೆಳೆಗಳವರೆಗೆ ಕಡ್ಡಾಯಗೊಳಿಸಬಾರದು. ಎಸ್‌ಎಟಿಐ ಪೋರ್ಟಲನ್ನು(ಬೀಜ ಮಾರಾಟ ಆ್ಯಪ್) ಮಾರಾಟಸ್ನೇಹಿಯಾಗಿ ರೂಪಿಸಬೇಕು. ಎಂಬಿತ್ಯಾದಿ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಕೊಡಗು ಜಿಲ್ಲಾ ಕೃಷಿ ಮಾರಾಟಗಾರರ ಸಂಘದ ಮೂಲಕ ಜಂಟಿ ಕೃಷಿ ನಿರ್ದೇಶಕರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಂ.ಆರ್. ನಂದಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ರಾಮಕೃಷ್ಣ, ನಿರ್ದೇಶಕ ಬಿ.ಎ.ಅರವಿಂದ್, ಎ.ಎಂ.ಕುಮಾರ್, ಮನೋಹರ್ ಕಾಮತ್, ಟಾಟಾ ಸಂಸ್ಥೆ ಪ್ರತಿನಿಧಿ ಇದ್ದರು.