ಮಡಿಕೇರಿ, ಏ. ೨೭: ಜಗತ್ತಿನ ಯಾವ ಧರ್ಮವೂ ದ್ವೇಷ, ಅಶಾಂತಿ, ಅಸಹನೆಗಳನ್ನು ಎಂದಿಗೂ ಪ್ರತಿಪಾದಿಸುವುದಿಲ್ಲ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅಭಿಮತ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ ತಾಲೂಕಿನ ಮೇಕೇರಿ ಮಖಾಂ ಉರೂಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಜಗತ್ತಿನ ಎಲ್ಲಾ ಧರ್ಮ ಗ್ರಂಥಗಳು, ಧರ್ಮ ಗುರುಗಳು, ವಿದ್ವಾಂಸರು, ಋಷಿ ಮುನಿಗಳು, ಸೂಫಿ, ಸಂತರು ಸೇರಿದಂತೆ ಜ್ಞಾನಿಗಳು ಮನುಕುಲಕ್ಕೆ ಪರಸ್ಪರ ಶಾಂತಿ, ಪ್ರೀತಿ, ಸೌಹಾರ್ದ ಹಾಗೂ ಸಹಬಾಳ್ವೆಗಳನ್ನು ಬೋಧಿಸಿದ್ದು ಅದರಂತೆ ಎಲ್ಲಾ ಸಮುದಾಯದ ಜನರು ಬಾಳಬೇಕು ಎಂದು ಕರೆ ನೀಡಿದರು.

ಹುಟ್ಟುವ ಯಾವುದೇ ವ್ಯಕ್ತಿ ಧರ್ಮವನ್ನಾಗಲಿ ಜಾತಿಯನ್ನಾಗಲಿ ಕೇಳಿಕೊಂಡು ಹುಟ್ಟುವುದಿಲ್ಲ. ಹುಟ್ಟಿನ ನಂತರ ಅಯಾ ಜಾತಿಯವರಾಗಿ ಧರ್ಮದವರಾಗಿ ಬಾಳುತ್ತಾರೆ. ಮನುಷ್ಯ ತನ್ನ ಬಾಳಿನಲ್ಲಿ ತನ್ನ ಜಾತಿ ಮತ್ತು ಧರ್ಮದ ಆಚರಣೆಯನ್ನು ಪಾಲಿಸಿ ಬೆಳೆಯುತ್ತಾ ಇತರರ ಧರ್ಮವನ್ನು ಗೌರವಿಸಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಸಯ್ಯದ್ ಸಮರುದ್ದೀನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಶಾಫಿ ಅಹದಿ ಸೋಮವಾರಪೇಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷÀ ತೆನ್ನಿರ ಮೈನಾ, ಸಲಾಂ ಹಳ್ರಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹನೀಫ್, ಪಿಯೂಸ್ ಪೆರೇರ, ಎ.ಎಲ್. ರಹೀಮ್, ರಫೀಕ್ ಮೇಕೇರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು