ಕುಶಾಲನಗರ, ಏ.೨೭: ವರ್ಷದ ವನವಾಸ ಕಳೆದು ಇದೀಗ ಕುಶಾಲನಗರದಲ್ಲಿ ಕಲಾಭವನದ ಕಟ್ಟಡದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡು ಅಲ್ಲೊಂದು ಇಲ್ಲೊಂದು ಸರಕಾರಿ ಕಾರ್ಯಕ್ರಮಗಳು ನಡೆಯುತ್ತಿರುವುದನ್ನು ಗಮನಿಸಬಹುದು.
ಕಲಾವಿದರಿಗೆ ಪ್ರೋತ್ಸಾಹ ಮತ್ತು ಕಲಾಭಿಮಾನಿಗಳಿಗೆ ಅನುಕೂಲ ಮಾಡುವ ಜೊತೆಗೆ ಕಲೆಗಳಿಗೆ ವೇದಿಕೆ ಸೃಷ್ಟಿ ಮಾಡುವ ಉದ್ದೇಶದೊಂದಿಗೆ ಕುಶಾಲನಗರದಲ್ಲಿ ಕಳೆದ ೨೦೦೯ ರಲ್ಲಿ ಆರಂಭಗೊAಡ ಯೋಜನೆ ಒಂದು ನೆನೆಗುದಿಗೆ ಬಿದ್ದು ಶಕ್ತಿಯ ಸುದ್ದಿಯ ಸದ್ದು ಗದ್ದಲಗಳ ನಡುವೆ ಇದೀಗ ಅಪರೂಪದಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವುದನ್ನು ಕಾಣಬಹುದು.
ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೊಂದಿಗೆ ಕಲಾಭವನದ ಉದ್ದೇಶ ಈಡೇರಲು ೧೬ ವರ್ಷಗಳೇ ಬೇಕಾಯಿತು. ಮಾಜಿ ಮುಖ್ಯಮಂತ್ರಿ ಗುಂಡೂರಾಯರ ತವರೂರಾದ ಕುಶಾಲನಗರದಲ್ಲಿ ೨೦೦೯ರಲ್ಲಿ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅವರು ಕಲಾಭವನಕ್ಕೆ ಸ್ಥಾಪನೆ ನೆರವೇರಿಸಿದ್ದು ಆರಂಭಿಕವಾಗಿ ಮೂರು ಕೋಟಿ ಅನುದಾನದಲ್ಲಿ ಕಾಮಗಾರಿ ಚಾಲನೆಗೊಂಡಿತ್ತು. ಬಳಿಕ ಕುಂಟುತ್ತಾ ಸಾಗಿದ ಕಾಮಗಾರಿ ವೆಚ್ಚ ದುಪ್ಪಟ್ಟಾಯಿತು. ಒಳಾಂಗಣದ ಅಪೂರ್ಣ ಕಾಮಗಾರಿ ಕಾರಣ ಭವನದ ಲೋಕಾರ್ಪಣೆಗೆ ಸಾಧ್ಯವಾಗಿರಲಿಲ್ಲ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಈಗಿನ ಶಾಸಕರಾದ ಡಾ ಮಂತರ್ ಗೌಡ ಅವರ ಇಚ್ಛಾಶಕ್ತಿಯೊಂದಿಗೆ ಸುಮಾರು ಎರಡು ಕೋಟಿ ವೆಚ್ಚದಲ್ಲಿ ಒಳಾಂಗಣವನ್ನು ಪೂರ್ಣಗೊಳಿಸಲು ಯೋಜನೆಯು ಸಿದ್ಧಗೊಂಡಿದೆ.
ಈಗಾಗಲೇ ಅಗತ್ಯ ಆಸನಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಧ್ವನಿ ಮತ್ತು ಬೆಳಕು ವ್ಯವಸ್ಥೆ ಮತ್ತು ಸುತ್ತಲೂ ಆವರಣದಲ್ಲಿ ಇಂಟರ್ಲಾಕ್, ಜನರೇಟರ್ ಮತ್ತು ಇತರ ಮೂಲಭೂತ ಸೌಲಭ್ಯಗಳು ಇನ್ನಷ್ಟೇ ಪೂರ್ಣಗೊಳ್ಳಬೇಕಾಗಿದೆ. ವಿಶೇಷವಾಗಿ ಕ್ಯಾಂಟೀನ್ ವ್ಯವಸ್ಥೆ ಕೂಡ ಕಲ್ಪಿಸಬೇಕಾಗಿದೆ. ಈ ನಡುವೆ ಕಟ್ಟಡ ಬೀಗ ಜಡಿದ ಪರಿಸ್ಥಿತಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕೂಡ ಅವಕಾಶ ಕಲ್ಪಿಸಿದಂತಾಗಿತ್ತು. ಕುಶಾಲನಗರದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಬೇಕಾದಲ್ಲಿ ಖಾಸಗಿ ಸಮುದಾಯ ಭವನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ ಕಲಾಭವನ ಪೂರ್ಣಗೊಂಡಲ್ಲಿ ಕಾರ್ಯಕ್ರಮಗಳಿಗೆ ವೇದಿಕೆಯಾಗಲು ಭವನ ಸಿದ್ಧವಾಗುತ್ತಿದೆ.
ಕುಶಾಲನಗರದಲ್ಲಿ ಯಾವುದೇ ಯೋಜನೆ ಆಗಲಿ, ಬೇಗನೆ ಆರಂಭಗೊಳ್ಳುತ್ತವೆ. ಆದರೆ ಪೂರ್ಣಗೊಳ್ಳುವುದು ಮಾತ್ರ ಅಪರೂಪ. ಮೂರು ಬಾರಿ ಭೂಮಿಪೂಜೆ ಶಂಕು ಸ್ಥಾಪನೆ ನೆರವೇರಿದ ಒಳಚರಂಡಿ ಯೋಜನೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕುಶಾಲನಗರ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರ ರೂ.೪೫ ಕೋಟಿ ಅನುದಾನ ಕಲ್ಪಿಸಿದ್ದು ಇನ್ನೂ ಜಾಗದ ವಿಷಯದಲ್ಲಿ ಮೀನಮೇಷ ಎಣಿಸಲಾಗುತ್ತಿದೆ. ಗುಂಡುರಾವ್ ಬಡಾವಣೆಯ ನಾಲ್ಕು ಎಕರೆ ಜಾಗದಲ್ಲಿ ನಿರ್ಮಾಣವಾಗಬೇಕಾದ ಆಸ್ಪತ್ರೆ ಕಟ್ಟಡ ವಿಷಯದಲ್ಲಿ ಜಾತ್ರಾ ನೆಪದಲ್ಲಿ ರಾಜಕೀಯ ಮೇಲಾಟ ಇನ್ನೂ ಮುಂದುವರೆದಿದೆ.
ಕಲಾಭವನ ಪೂರ್ಣಗೊಂಡ ಬೆನ್ನಲ್ಲೇ ಬಯಲುಸೀಮೆ ಸೇರಿದಂತೆ ಪಟ್ಟಣದ ಹಾಗೂ ಜಿಲ್ಲೆಯ ಸುತ್ತಮುತ್ತ ವ್ಯಾಪ್ತಿಯ ಕಲಾವಿದರು ಕಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ದೊಡ್ಡ ವೇದಿಕೆ ಲಭಿಸಲಿದೆ.
-ಚಂದ್ರಮೋಹನ್