ಐಗೂರು, ಏ.೨೭: ಐಗೂರು ಗ್ರಾಮ ವ್ಯಾಪ್ತಿಯ ಯಡವಾರೆಯ ಚೆನ್ನಿಗರಾಯ ಸ್ವಾಮಿಯ ೪ನೇ ವರ್ಷದ ವಾರ್ಷಿಕ ಪೂಜೆಯು ಎರಡು ದಿನಗಳ ಕಾಲ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ದೇವಾಲಯವು ತಳಿರು ತೋರಣ ಮತ್ತು ವಿದ್ಯುತ್ ದೀಪಗಳ ಅಲಂಕಾರಗಳಿAದ ಕಂಗೊಳಿಸುತ್ತಿತ್ತು. ದೇವಾಲಯದ ಮಂಟಪದ ಲೋಕಾರ್ಪಣೆಯನ್ನು ಶ್ರೀ ಕ್ಷೇತ್ರ ತಂತ್ರಿಗಳಾದ ಚಾಲ ಕುನ್ನತ್ತಿಲಂ ಗೋಪಾಲಕೃಷ್ಣ ನಂಬೂದರಿಯವರು ನೆರವೇರಿಸಿದರು.

ಎರಡು ದಿನಗಳ ಕಾಲ ದೇವಾಲಯದಲ್ಲಿ ತಂತ್ರಿಗಳು ಮತ್ತು ಅರ್ಚಕರಾದ ಜಯಂತ್ ಭಟ್ ಅವರ ನೇತೃತ್ವದಲ್ಲಿ ಪುಣ್ಯಾಹ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ಸುದ್ದಿ, ವಾಸ್ತು ರಕ್ಷೋಘ್ನ ಹೋಮ, ಕಲಾ ವೃದ್ಧಿ ಸಹಿತ ಸಹಸ್ರನಾಮ ಪಠಣ, ಸತ್ಯನಾರಾಯಣ ಸ್ವಾಮಿಪೂಜೆ, ಕಲಾಭಿಷೇಕ, ಮಹಾಪೂಜೆ ಹಾಗೂ ಪ್ರಸಾದ ವಿನಿಯೋಗಗಳು ನಡೆದವು.

ಐಗೂರು, ಯಡವಾರೆ ಮತ್ತು ಕಾಜೂರಿನ ಭಕ್ತಾದಿಗಳು ಭಾಗವಹಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪೂಜೆಯನ್ನು ಸಲ್ಲಿಸಿದರು. ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಿತು. ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.