ಪೊನ್ನಂಪೇಟೆ, ಏ. ೨೭: ಪಾನಮತ್ತರಾದ ಅಸ್ಸಾಂ ಮೂಲದ ಯುವಕರು ಪೊನ್ನಂಪೇಟೆಯ ಹೂವಿನ ವ್ಯಾಪಾರಿ ಮೇಲೆ ಹಲ್ಲೆ ನಡೆಸಿದ ಘಟನೆ ತಾ. ೨೬ ರಂದು ಮಧ್ಯಾಹ್ನ ನಡೆದಿದೆ.

ಇಲ್ಲಿನ ಬಸ್ ನಿಲ್ದಾಣದಲ್ಲಿ ಅಸ್ಸಾಂ ಮೂಲದ ನಾಲ್ವರು ಯುವಕರು ಪರಸ್ಪರ ಹೊಡೆದಾಡಿಕೊಂಡು ನಂತರ, ಬಸವೇಶ್ವರ ದೇವಸ್ಥಾನದ ಬದಿಯಲ್ಲಿರುವ ರಾಜ ಎಂಬವರ ಹೂವಿನ ಅಂಗಡಿಗೆ ತೆರಳಿ ವ್ಯಾಪಾರಕ್ಕೆ ಇಟ್ಟಿದ್ದ ಹೂಮಾಲೆಗಳನ್ನು ಕಿತ್ತು ರಸ್ತೆಗೆ ಎಸೆದಿದ್ದಾರೆ.

ಇದನ್ನು ಪ್ರಶ್ನಿಸಿದ ಅಂಗಡಿ ಮಾಲೀಕನಿಗೆ ಅಲ್ಲೇ ಇದ್ದ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದು, ಹೂವಿನ ವ್ಯಾಪಾರಿ ರಾಜ ಅವರನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗಿದೆ. ಇದರಿಂದ ಕೆರಳಿದ ಸ್ಥಳೀಯರು ಹಲ್ಲೆ ಮಾಡಿದ ಯುವಕರನ್ನು ಹಿಡಿದು ಧರ್ಮದೇಟು ನೀಡಿ, ಸಂಚಾರಿ ಪೊಲೀಸ್ ೧೧೨ ಕ್ಕೆ ಕರೆಮಾಡಿ ನಂತರ ಪೊಲೀಸರಿಗೆ ಒಪ್ಪಿಸಿದರು. ಪುಂಡಾಟ ಮೆರೆದ ಆರೋಪಿಗಳಾದ ಕಿರಣ್ ಮತ್ತು ಸುನಿಲ್ ಎಂಬವರನ್ನು ಪೊನ್ನಂಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ದಕ್ಷಿಣ ಕೊಡಗಿನಲ್ಲಿ ಹೊರ ರಾಜ್ಯದ ಕಾರ್ಮಿಕರ ಹಾವಳಿ ಮಿತಿಮೀರಿದ್ದು ಸ್ಥಳೀಯರು ಆಕ್ರೋಶಗೊಂಡಿದ್ದಾರೆ.