ಪೊನ್ನAಪೇಟೆ, ಏ. ೨೬: ಪೊನ್ನಂಪೇಟೆ ತಾಲೂಕಿನ ನ್ಯಾಯಾಲಯದಲ್ಲಿ ಶಾಶ್ವತವಾಗಿ ಸಿವಿಲ್ ನ್ಯಾಯಾಧೀಶರ (ಹಿರಿಯ ಶ್ರೇಣಿ) ನ್ಯಾಯಾಲಯ ಶೀಘ್ರದಲ್ಲೇ ಶುಭಾರಂಭಗೊಳ್ಳಲಿದೆ. ಪೊನ್ನಂಪೇಟೆ ನ್ಯಾಯಾಲಯ ಸಮುಚ್ಚಯದಲ್ಲಿ ೨೦೧೮ ರಿಂದ ಸಿವಿಲ್ ನ್ಯಾಯಾಧೀಶರ (ಹಿರಿಯ ಶ್ರೇಣಿ) ನ್ಯಾಯಾಲಯ ವಾರಕ್ಕೆ ಎರಡು ದಿನಗಳ ಕಾಲ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ತಾ. ೨೨ ರಂದು ಕರ್ನಾಟಕ ಮಾನ್ಯ ಉಚ್ಛ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ ಸಿವಿಲ್ ನ್ಯಾಯಾಧೀಶರ (ಹಿರಿಯ ಶ್ರೇಣಿ) ನ್ಯಾಯಾಲಯ ಪೊನ್ನಂಪೇಟೆ ನ್ಯಾಯಾಲಯ ಸಮುಚ್ಚಯದಲ್ಲಿ ಶಾಶ್ವತವಾಗಿ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಶ್ರಮಿಸಿದ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ವಕೀಲರಾದ ಮಾಚಿಮಂಡ ಸುರೇಶ್ ಅಯ್ಯಪ್ಪ, ಮತ್ರಂಡ ಅಪ್ಪಚ್ಚು, ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಡಿ. ಕಾವೇರಪ್ಪ, ದಿ. ಎಂ.ಬಿ. ನಾಣಯ್ಯ, ಕೆ.ಡಿ. ಮುತ್ತಪ್ಪ ಹಾಗೂ ಪ್ರಸ್ತುತ ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಂಗಡ ರಾಕೇಶ್, ಉಪಾಧ್ಯಕ್ಷೆ ಸಿ.ಬಿ. ಅನಿತಾ, ಕಾರ್ಯದರ್ಶಿ ಗಿರೀಶ್ ಅಣ್ಣಯ್ಯ ಹಾಗೂ ಪದಾಧಿಕಾರಿಗಳು ಮತ್ತು ಸರ್ವ ವಕೀಲರ ಸಂಘದ ಸದಸ್ಯರುಗಳ ಸಹಕಾರ ಈ ನ್ಯಾಯಾಲಯ ಸ್ಥಾಪನೆಗೆ ಕಾರಣವಾಗಿದ್ದು, ಪೊನ್ನಂಪೇಟೆ ವಕೀಲರ ಸಂಘದ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಇದರಿಂದ ತಾಲೂಕಿನ ಸಾರ್ವಜನಿಕರಿಗೆ ಹಾಗೂ ಕಕ್ಷಿದಾರರಿಗೆ ಹೆಚ್ಚಿನ ಪ್ರಯೋಜನವಾಗಲಿದ್ದು, ಶೀಘ್ರದಲ್ಲೇ ನ್ಯಾಯಾಲಯದ ಉದ್ಘಾಟನೆ ನೆರವೇರಲಿದೆ.