ಸಿದ್ದಾಪುರ, ಏ. ೨೫: ಕಾಡುಪ್ರಾಣಿಗಳ ಹಾವಳಿಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವರ್ಷವಿಡೀ ಕಷ್ಟಪಟ್ಟು ಬೆಳೆದ ಫಸಲುಗಳು ಕಾಡುಪ್ರಾಣಿಗಳ ಪಾಲಾಗುತ್ತಿದೆ. ರೈತರು, ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಆತಂಕದ ಜೀವನ ನಡೆಸುವಂತಾಗಿದೆ.
ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಬೇಕೆಂದು ಚೆನ್ನಂಗಿ ಕಾವೇರಿ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಡಾ. ಎ.ಸಿ. ಗಣಪತಿ ಒತ್ತಾಯಿಸಿದರು.
ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಸಮೀಪದ ಚೆನ್ನಂಗಿ ಕಾವೇರಿ ಸೇವಾ ಸಂಘದ ಸಭಾಂಗಣದಲ್ಲಿ ಬೆಳೆಗಾರರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ರೈತರು ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಸಾಲಮಾಡಿ ಕಷ್ಟಪಟ್ಟು ಬೆಳೆದ ಕೃಷಿ ಫಸಲುಗಳು ಕಾಡುಪ್ರಾಣಿಗಳ ಪಾಲಾಗುತ್ತಿವೆ. ಇದರಿಂದ ರೈತ ಆರ್ಥಿಕ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ಕೃಷಿಯಿಂದ ದೂರವಿದ್ದು ಸಂಕಷ್ಟದ ಜೀವನ ನಡೆಸುವಂತಾಗಿದೆ. ಹೊಟ್ಟೆಪಾಡಿಗಾಗಿ ದುಡಿಯುವ ಕಾರ್ಮಿಕರು ಕಾಡುಪ್ರಾಣಿಗಳ ಹಾವಳಿಯಿಂದ ಕೆಲಸಕ್ಕೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣ ಕಲಿಯಬೇಕೆಂಬ ಆಸೆಯಿಂದ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಕಾಡುಪ್ರಾಣಿಗಳ ಭಯದಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದ ಅವರು, ಸರ್ಕಾರ ಹಾಗೂ ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಇದೇ ಸಂದರ್ಭ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ನೀಡಿ ಆನೆ ಕಂದಕ ದುರಸ್ತಿಗೊಳಿಸುವುದು, ಚೆನ್ನಂಗಿ - ಬಸವನಹಳ್ಳಿ ರಸ್ತೆಯ ರೈಲ್ವೆ ಗೇಟ್ ಮೇಲುಸ್ತುವಾರಿಗೆ ಸಿಬ್ಬಂದಿ ನೇಮಕ ಮತ್ತು ಅಲ್ಲಿ ವಸತಿ ಗೃಹ ನಿರ್ಮಾಣ, ಅಳವಡಿಸಿರುವ ರೈಲ್ವೆ ಗೇಟ್ಗಳನ್ನು ಸುಸ್ಥಿರಗೊಳಿಸುವುದು ಮತ್ತು ಕಾವಲುಗಾರರನ್ನು ನಿಯೋಜನೆ ಮಾಡುವುದು. ಅಧಿಕಾರಿಗಳ, ಸಾರ್ವಜನಿಕರ ವಾಟ್ಸಾö್ಯಪ್ ಗ್ರೂಪ್ ರಚಿಸಿ ಮಾಹಿತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು. ಹುಣಸೂರು ವಿಭಾಗದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ಸೀಮ, ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಅಹವಾಲು ಆಲಿಸಿ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರಲ್ಲದೆ ಅರಣ್ಯ ಇಲಾಖೆ ಕೈಗೊಂಡಿರುವ ಯೋಜನೆಗಳು ಹಾಗೂ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಬೆಳೆಗಾರರು ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಷ್ಟ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನ ಸೆಳೆದರು.
ಹುಣಸೂರು ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಿಕಾಂತ್, ವಲಯ ಅರಣ್ಯ ಅಧಿಕಾರಿ ದೇವರಾಜು, ಉಪವಲಯ ಅಧಿಕಾರಿ ಚೆನ್ನವಿರೇಶ್, ಶಶಿ, ಕಾವೇರಿ ಸೇವಾ ಸಂಘದ ಅಧ್ಯಕ್ಷ ತೆಕ್ಕಡೆ ಶ್ರೀನಿವಾಸ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ ಕುಮಾರ್, ಬೆಳೆಗಾರರಾದ ಎಂ.ಎಸ್. ಟವಿ, ಎ.ಎಸ್. ಶ್ಯಾಮ್, ಪಿ.ಎ. ಅನಂತರಾಮ್, ಎ.ಬಿ. ವಿನು ಪೊನ್ನಪ್ಪ, ಮುಲ್ಲೇಂಗಡ ಕಿಶೋರ್, ವಿ.ಬಿ. ಸುರೇಶ್, ಮುಸ್ತಫಾ ಸೇರಿದಂತೆ ಗ್ರಾಮಸ್ಥರು, ಮತ್ತಿತರರು ಉಪಸ್ಥಿತರಿದ್ದರು. - ಮುಬಾರಕ್