ಗೋಣಿಕೊಪ್ಪಲು, ಏ. ೨೫: ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಸ್ವಚ್ಚತಾ ಪೌರ ಕಾರ್ಮಿಕರಿಗೆ ನಿವೇಶನ ನೀಡುವ ಸಲುವಾಗಿ ಕಾಯ್ದಿರಿಸಿರುವ ಸರ್ವೆ ನಂ. ೫/೧೯ರ ಸರ್ವೆ ಕಾರ್ಯವು ನಡೆಯಿತು.
ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರಾಗಿ ಹಲವು ವರ್ಷಗಳಿಂದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಹಲವು ಕುಟುಂಬಗಳು ಸ್ವಂತ ನಿವೇಶನ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಸ್ಥಳವನ್ನು ಕಾಯ್ದಿರಿಸಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು. ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು ಕಾಯ್ದಿರಿಸಿದ ಸ್ಥಳದಲ್ಲಿ ಹಸಿ ಮೀನು ಮಾರುಕಟ್ಟೆ ಹಾಗೂ ಹಂದಿ ಮಾಂಸದ ಮಾರುಕಟ್ಟೆಯನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿಗೆ ಸೂಚನೆ ನೀಡಿದ್ದರು.
ಅಧಿಕಾರಿಗಳ ಆದೇಶವಿದ್ದರೂ ಗ್ರಾಮ ಪಂಚಾಯಿತಿಯು ಪ್ರಸ್ತುತ ಸಾಲಿನಲ್ಲಿ ಪಂಚಾಯಿತಿಗೆ ಆದಾಯ ಕ್ರೋಢಿಕರಿಸುವ ಸಲುವಾಗಿ ಹಂದಿ ಮಾರುಕಟ್ಟೆ ಹಾಗೂ ಹಸಿ ಮೀನು ಮಾರುಕಟ್ಟೆ ಟೆಂಡರ್ ಪ್ರಕ್ರಿಯೆ ನಡೆಸಿದ್ದರು. ಈ ಬಗ್ಗೆ ಪೌರ ಕಾರ್ಮಿಕರು ತಮ್ಮ ಅಸಮಧಾನ ಹೊರಹಾಕಿ ಪ್ರತಿಭಟನೆ ನಡೆಸಿ ಟೆಂಡರ್ ಪ್ರಕ್ರಿಯೆ ನಡೆಸದಂತೆ ಒತ್ತಡ ಹಾಕಿದ್ದರು.
ಸರ್ವೆ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರ ಸಮ್ಮುಖದಲ್ಲಿ ಸರ್ವೆ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಮುಂಜಾನೆಯಿAದಲೆ ಸರ್ವೆ ಕಾರ್ಯ ನಡೆಸಿದರು. ಈ ವೇಳೆ ಪೌರ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ರಾಜು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಪೌರ ಕಾರ್ಮಿಕರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಸರ್ವೆ ಕಾರ್ಯ ಕೈಗೊಂಡಿರಲಿಲ್ಲ. ಇದೀಗ ಅಧಿಕಾರಿಗಳು ನಿಗಧಿತ ಸ್ಥಳವನ್ನು ಪೌರ ಕಾರ್ಮಿಕರ ನಿವೇಶನಕ್ಕೆ ಕಾಯ್ದಿರಿಸಿ ಆದೇಶ ಮಾಡಿರುವುದರಿಂದ ಸರ್ವೆ ಕಾರ್ಯವು ನಡೆದಿದೆ. ಪಂಚಾಯಿತಿ ಆಡಳಿತ ಮಂಡಳಿಯು ಸ್ವಚ್ಚತಾ ಕಾರ್ಯ ನಡೆಸುವ ಪೌರ ಕಾರ್ಮಿಕರಿಗೆ ನಿವೇಶನವನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮುರುಗ ಮಾತನಾಡಿ ನಿಗಧಿತ ಸ್ಥಳವನ್ನು ಪೌರಕಾರ್ಮಿಕರಿಗೆ ನಿವೇಶನವಾಗಿ ನೀಡಲು ಈ ಹಿಂದೆಯೇ ನಿರ್ಣಯ ಕೈಗೊಳ್ಳಲಾಗಿದೆ. ಪ್ರಸ್ತುತ ಮೀನು ಮಾರುಕಟ್ಟೆಯನ್ನು ಟೆಂಡರ್‌ನಲ್ಲಿ ಪಡೆದುಕೊಂಡಿದ್ದೇವೆ. ಅಗತ್ಯವಿದ್ದಲ್ಲಿ ಇದನ್ನು ಬಿಟ್ಟುಕೊಡಲು ಸಿದ್ದರಿದ್ದೇವೆಂದರು.