ವೀರಾಜಪೇಟೆ, ಏ. ೨೫: ಕಡಂಗಮೂರೂರು, ಅರಮೇರಿ ಗ್ರಾಮಸ್ಥರ ವಿರೋಧದ ನಡುವೆಯೂ ಅರಮೇರಿ ಭಾಗದಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅನುಮತಿ ನೀಡಿರುವ ಹಿನ್ನೆಲೆ ಗಣಿಗಾರಿಕೆ ವಿರುದ್ದ ಹೋರಾಟ ತೀವ್ರಗೊಳಿಸಲು ಗ್ರಾಮಸ್ಥರು ನಿರ್ಧಾರ ಕೈಗೊಂಡರು.

ಇತ್ತೀಚೆಗೆ ಶಾಸಕರು ಈ ಗಣಿಗಾರಿಕೆ ನಿಲ್ಲಿಸಲು ಸೂಚಿಸಿದಂತೆ ಗಣಿಗಾರಿಕೆ ನಿಲುಗಡೆಯಾಗಿತ್ತು. ಈಗ ಮತ್ತೆ ಗಣಿಗಾರಿಕೆಗೆ ಭಾರಿ ಸ್ಫೋಟಕ ಬಳಸಿ ಗಣಿಗಾರಿಕೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಹಿಳಾ ಸಮಾಜ ಸಭಾಂಗಣದಲ್ಲಿ ಕಡಂಗಮೂರೂರು ಮತ್ತು ಅರಮೇರಿ ಗ್ರಾಮಸ್ಥರು ಸಭೆ ನಡೆಸಿ ಈ ವಿಚಾರವಾಗಿ ಚರ್ಚಿಸಿದರು. ಈ ವಿಚಾರವಾಗಿ ಮುಂದೆ ತಮ್ಮ ಹೋರಾಟ ತೀವ್ರ ಗೊಳಿಸಲು ಗ್ರಾಮಸ್ಥರು ನಿರ್ಧರಿಸಿದರು.

ಗಣಿಗಾರಿಕೆ ವಿಚಾರದಲ್ಲಿ ಉಭಯ ಗ್ರಾಮಸ್ಥರು ೨೦೨೨ ರಿಂದ ಹೋರಾಟ ನಡೆಸುತ್ತ ಬಂದಿದ್ದರು ಗ್ರಾ.ಪಂ ಹೆಚ್ಚು ಅವಲೋಕನ ನಡೆಸದೆ ಅಂದು ಒಪ್ಪಿಗೆ ಪತ್ರ ನೀಡಿದೆ. ಗ್ರಾಮಸ್ಥರು ವಿವಿಧ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಅದರ ಫಲಿತಾಂಶ ಶೂನ್ಯವಾಗಿದೆ. ೨೦೨೪ ರಲ್ಲಿ ತಹಶೀಲ್ದಾರ್‌ಗೆ ನೀಡಿದ ದೂರಿನಂತೆ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿ ಗ್ರಾಮಸ್ಥರ ಅಹವಾಲು ಆಲಿಸಿದ್ದಾರೆ. ಆದರೆ ಅಲ್ಲಿಯೂ ವಸತಿ ಪ್ರದೇಶದ ಕೃಷಿ ಪ್ರದೇಶದ ವ್ಯಾಪಕ ಸರ್ವೆ ಆಗಿಲ್ಲ. ನಂತರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಲಾಯಿತು. ಅದರಿಂದ ಯಾವ ಪ್ರಯೋಜನ ಆಗಿಲ್ಲ. ಜಿಲ್ಲಾಧಿಕಾರಿ ಆದೇಶ ನೀಡಿದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗ್ರಾಮಸ್ಥರ ಸಭೆ ಕರೆದು ಚರ್ಚಿಸಿಲ್ಲ. ಅರಮೇರಿ ಗ್ರಾಮದ ಸರ್ವೆ ಸಂ ೩೪೩ ರ ೪.೫೦ ಎಕ್ರೆಯಲ್ಲಿ ಗಣಿಗಾರಿಕೆಗೆ ಪರವಾನಗಿ ನೀಡಿದ್ದಾರೆ. ಇಲ್ಲಿ ಪರವಾನಗಿಯಂತೆ ಮಾನವ ಶಕ್ತಿ ಬಳಸಿ ಕಲ್ಲು ಒಡೆಯಬೇಕು ಸ್ಫೋಟ ನಡೆಸದಂತೆ ಸೂಚಿಸಿದರೂ ಭಾರಿ ಸ್ಫೋಟಕವನ್ನು ಬಳಸುತ್ತಿರುವುದು ವಿಪರ್ಯಾಸ. ಇದಕ್ಕೆ ಪೂರಕವಾಗಿ ಸಭೆ ನಡೆಯುತ್ತಿರುವಾಗಲೆ ಭಾರಿ ಸ್ಪೋಟದ ಶಬ್ದ ಕೇಳಿ ಬರುತ್ತಿತ್ತು. ಈ ಹಿಂದೆ ಇಲ್ಲಿಂದ ೭೦ ರಿಂದ ೮೦ ಟಿಪ್ಪರ್ ಕಲ್ಲು ನಿತ್ಯ ಸಾಗಾಟವಾಗುತ್ತಿತ್ತು ಎಂದು ಗ್ರಾಮಸ್ಥರು ಗಣಿಗಾರಿಕೆಯ ಗಂಭೀರತೆಯನ್ನು ತೆರೆದಿಟ್ಟರು.

ಈ ಕುರಿತು ಇದೇ ಏ.೧೨ ರಂದು ಪೊಲೀಸರಿಗೆ ದೂರು ನೀಡಿದರು ಸೂಕ್ತ ಸ್ಪಂದನೆ ದೊರಕಿಲ್ಲ. ಈಗ ಕೇರಳದ ಮೂಲದವರಿಗೆ ಈ ಗಣಿಗಾರಿಕೆ ನಡೆಸಲು ಅವಕಾಶ ನೀಡಿ ತೆರೆ ಮರೆಯ ಅನೇಕ ಕಸರತ್ತು ನಡೆಸಿ ಗಣಿಗಾರಿಕೆ ನಡೆಸಲಾಗುತ್ತಿದೆ. ಈ ಕುರಿತು ಸಭೆಯಲ್ಲಿ ಸಂಬAಧಿಸಿದ ಇಲಾಖೆ ನಿಯಮ ಬಾಹಿರವಾಗಿ ನೀಡಿರುವ ಪರವಾನಿಗೆ ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ.

ಸಭೆಯಲ್ಲಿ ಗ್ರಾಮಸ್ಥರಾದ ಪೂಳಂಡ ಡಾಲು ಪೂಣಚ್ಚ, ಪೂಳಂಡ ಮಾಚಯ್ಯ, ಬಾಚೀರ ಬಿದ್ದಪ್ಪ, ಬಲ್ಟಿಕಾಳಂಡ ಮಾದಪ್ಪ, ಕಾಂಗೀರ ಸತೀಶ್, ವಿವೇಕಾನಂದ ಬಲ್ಯಂಡ ಮುತ್ತಣ್ಣ, ಕೋದಂಡ ಸುರ ಅಯ್ಯಪ್ಪ, ಕೋದಂಡ ಮಂಜುಳ ಅಯ್ಯಪ್ಪ, ಚೋಳಂಡ ರಮೇಶ್ ಕಾವೇರಪ್ಪ, ಅಲ್ಲಂಡ ನಂದ, ಪದ್ಮನಾಭ ನಾಯ್ಡು, ಬಲ್ಲಚಂಡ ಚಂಗಪ್ಪ, ಅಮ್ಮಂಡ ಸತೀಶ್ ಪಳಂಗAಡ ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.