ಮಡಿಕೇರಿ, ಏ. ೨೫: ಪ್ರಾಕೃತಿಕ ಜಿಲ್ಲೆ ಕೊಡಗು ಕೂಡ ಬೇಸಿಗೆಯ ಬಿಸಿಲಿನ ತಾಪಕ್ಕೆ ತತ್ತರಿಸುವಂತಾಗಿದೆ. ಬೆಟ್ಟ-ಗುಡ್ಡಗಳು, ಗಿರಿ-ಕಂದರಗಳು, ಹರಿಯುವ ನದಿ, ಮರ-ಗಿಡಗಳಿದ್ದರೂ ಜಿಲ್ಲೆಯಾದ್ಯಂತ ಬಿಸಿಲಿನ ಧಗೆ ದಿನೇ ದಿನೇ ಹೆಚ್ಚಾಗುತ್ತಿದೆ.
ಪ್ರಸ್ತುತ ದಿನಂಪ್ರತಿ ೩೫ ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಕಾಂಕ್ರೀಟ್ ಕಟ್ಟಡ, ರಸ್ತೆಗಳು ಹೆಚ್ಚಾಗಿರುವ ಸ್ಥಳಗಳಲ್ಲಿ ನೇಸರನ ಉರಿ ಜನತೆಗೆ ‘ಉಸ್ಸಪ್ಪಾ’ ಎಂಬAತೆ ಭಾಸವಾಗುತ್ತಿದೆ.’ ನದಿ - ತೊರೆ - ಕೆರೆ, ತೋಡುಗಳಲ್ಲಿ ನೀರಿನ ಮಟ್ಟ ಪ್ರತಿದಿನ ಕುಸಿತ ಕಾಣುತ್ತಿದೆ.
ಬಿಸಿಲ ತಾಪದಿಂದ ಸುಧಾರಿಸಿಕೊಳ್ಳಲು ಜನರು ತಂಪು ಪಾನೀಯ, ಹಣ್ಣಿನ ಜ್ಯೂಸ್, ತೆಳುಬಟ್ಟೆ, ಫ್ಯಾನ್, ಎ.ಸಿ. ವ್ಯವಸ್ಥೆಗಳನ್ನು ಅವಲಂಬಿಸುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯ ವಿವಿಧೆಡೆಗಳಲ್ಲಿ ಜನಾಂಗೀಯ ಕ್ರೀಡಾಕೂಟಗಳು ಸೇರಿದಂತೆ ಹತ್ತು ಹಲವಾರು ಕ್ರೀಡೆಗಳು ಆಯೋಜನೆಗೊಂಡಿದ್ದು, ಕ್ರೀಡಾಪಟುಗಳು ಸುಡು ಬಿಸಿಲಿನ ನಡುವೆ ಪರಿತಪಿಸುವಂತಾಗಿದೆ. ಪೋಷಕರು ಮಕ್ಕಳನ್ನು ರಸ್ತೆ - ಬೀದಿಗಳಿಗೆ ಬಿಡಲು ಕಡಿವಾಣ ಹಾಕುತ್ತಿದ್ದಾರೆ. ಈ ಸಮಯದಲ್ಲಿ ಮಳೆಯನ್ನು ಜನರು ನಿರೀಕ್ಷಿಸುತ್ತಿದ್ದಾರಾದರೂ ಕೆಲವೆಡೆಗಳಿಗೆ ಮಾತ್ರ ಮಳೆ ಬೀಳುತ್ತಿರುವುದು ಸೋಜಿಗವಾಗಿದೆ. ಬಹುತೇಕ ಕಡೆಗಳಲ್ಲಿ ಮಳೆಯ ಲಕ್ಷಣ ಕಂಡುಬAದರೂ ಮಳೆ ಮಾತ್ರ ಧರೆಗೆ ಬೀಳುತ್ತಿಲ್ಲ. ಕೆಲ ಸಮಯದ ಹಿಂದೆ ಸುರಿದ ಮಳೆಗೆ ಕಾಫಿ ತೋಟಗಳು ಸೇರಿದಂತೆ ಇನ್ನಿತರ ಕೃಷಿ ಫಸಲುಗಳಿಗೆ ಒಂದಷ್ಟು ಪ್ರಯೋಜನವಾಗಿತ್ತು. ಆದರೆ ಈಗಿನ ಸನ್ನಿವೇಶ ಮತ್ತೆ ವ್ಯತಿರಿಕ್ತವಾಗುತ್ತಿದೆ. ಬಿಸಿಲಿನ ಪ್ರತಾಪದಿಂದಾಗಿ ಅಪರಾಹ್ನದಿಂದ ಸಂಜೆಯ ತನಕ ಜನರ ಓಡಾಟವೂ ಕಡಿಮೆಯಾದಂತಿದೆ. ಬೇಸಿಗೆಯ ನಡುಭಾಗ ಇದಾಗಿದ್ದು, ಇನ್ನೂ ಮೇ ತಿಂಗಳ ಅವಧಿ ಹೇಗಿರುತ್ತದೋ ಎಂಬ ದಿಗಿಲು ಜನತೆಯಲ್ಲಿ ಎದುರಾಗಿದೆ. ಮಧ್ಯಾಹ್ನದ ವೇಳೆಗೆ ಮನೆಯಲ್ಲಿನ ಟ್ಯಾಪ್‌ಗಳಲ್ಲಿ ಬಿಸಿ ನೀರು ಬರುತ್ತಿರುವುದು ಈಗಿನ ಬಿಸಿಲಿನ ಜಳಕ್ಕೆ ಸಾಕ್ಷಿಯಂತಿದೆ.