ಸೋಮವಾರಪೇಟೆ, ಏ. ೨೫: ಒಕ್ಕಲಿಗರ ಸಂಘದಿAದ ರೂ.೧೦ ಕೋಟಿ ವೆಚ್ಚದಲ್ಲಿ ಬಾಲಕಿಯರ ವಿದ್ಯಾರ್ಥಿ ವಸತಿ ನಿಲಯ ಕಾಮಗಾರಿ ಪ್ರಗತಿಯಲ್ಲಿದ್ದು, ಇದೇ ನವೆಂಬರ್ ಅಂತ್ಯದೊಳಗೆ ಕಟ್ಟಡವನ್ನು ಪೂರ್ಣಗೊಳಿಸುವ ಯೋಜನೆಯಿದೆ ಎಂದು ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹರಪಳ್ಳಿ ರವೀಂದ್ರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯ ಒಕ್ಕಲಿಗರ ಸಂಘದ ಮೂಲಕ ಇದೇ ಪ್ರಥಮ ಬಾರಿಗೆ ಕೊಡಗಿಗೆ ಅನುದಾನಗಳು ಲಭ್ಯವಾಗಿವೆ. ರೂ. ೧೦ ಕೋಟಿ ಅನುದಾನ ಲಭ್ಯವಾಗಿದ್ದು, ಇದರಲ್ಲಿ ರೂ. ೫೫ ಲಕ್ಷದಲ್ಲಿ ನಿವೇಶನ ಖರೀದಿಸಲಾಗಿದೆ. ರೂ. ೯.೪೫ ಕೋಟಿ ವೆಚ್ಚದಲ್ಲಿ ವಸತಿ ನಿಲಯ ಹಾಗೂ ಹೃದ್ರೋಗ ತಪಾಸಣಾ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿ ವಸತಿ ನಿಲಯದೊಂದಿಗೆ ಹೃದ್ರೋಗ ತಪಾಸಣಾ ಕೇಂದ್ರ ಸ್ಥಾಪನೆಗೂ ಒಕ್ಕಲಿಗರ ಸಂಘದ ಆಡಳಿತ ಮಂಡಳಿ ಆಡಳಿತಾತ್ಮಕ ಅನುಮೋದನೆ ನೀಡಿದೆ. ಪ್ರಾಥಮಿಕ ಹಂತದಲ್ಲಿಯೇ ಹೃದ್ರೋಗವನ್ನು ತಪಾಸಣೆ ಮಾಡಿ, ಪ್ರಾಥಮಿಕ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. ಈ ಭಾಗದಲ್ಲಿ ಹೃದ್ರೋಗ ತಪಾಸಣಾ ಕೇಂದ್ರ ಸ್ಥಾಪನೆಯಾದರೆ ಹಲವಷ್ಟು ಮಂದಿಗೆ ಅನುಕೂಲವಾಗಲಿದೆ ಎಂದು ರವೀಂದ್ರ ಅಭಿಪ್ರಾಯಿಸಿದರು.

ಇದರೊಂದಿಗೆ ವೀರಾಜಪೇಟೆ ಭಾಗದಲ್ಲಿ ಒಕ್ಕಲಿಗರ ಭವನ ನಿರ್ಮಾಣಕ್ಕೆ ಮೂರು ಏಕರೆ ಜಾಗವನ್ನು ಖರೀದಿಸುವ ಪ್ರಯತ್ನ ಸಾಗಿದೆ. ಸದ್ಯದಲ್ಲಿಯೇ ಜಾಗವನ್ನು ಖರೀದಿಸಲಾಗುವುದು. ಮಡಿಕೇರಿ ಹಾಗೂ ಕುಶಾಲನಗರದಲ್ಲಿಯೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ವಸತಿ ನಿಲಯ ಸ್ಥಾಪನೆಗೆ ಕ್ರಮವಹಿಸಲಾಗಿದೆ ಎಂದರು. ಸೋಮವಾರಪೇಟೆಯಲ್ಲಿ ಸ್ಥಾಪನೆಯಾಗುತ್ತಿರುವ ವಿದ್ಯಾರ್ಥಿ ವಸತಿ ನಿಲಯದ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ. ಯೋಜನೆಯಂತೆಯೇ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ರವೀಂದ್ರ ಹೇಳಿದರು.

ಮುಂದಿನ ದಿನಗಳಲ್ಲಿ ನರ್ಸಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಯ ಚಿಂತನೆಯಿದೆ. ಆಸ್ಪತ್ರೆ ಸ್ಥಾಪನೆಯ ಬಗ್ಗೆ ಈಗಾಗಲೇ ಸ್ವಾಮೀಜಿಗಳು ಹಾಗೂ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯೊAದಿಗೆ ಮಾತುಕತೆ ನಡೆಸಲಾಗಿದೆ. ಮಡಿಕೇರಿ ಅಥವಾ ಕುಶಾಲನಗರದಲ್ಲಿ ಕಿಮ್ಸ್ನಿಂದ ಆಸ್ಪತ್ರೆ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದೆ ಎಂದರು. ಗೋಷ್ಠಿಯಲ್ಲಿ ಒಕ್ಕಲಿಗರ ಯುವವೇದಿಕೆ ನಿರ್ದೇಶಕ ಕಲ್ಕಂದೂರು ಪ್ರಕಾಶ್, ಉಪಾಧ್ಯಕ್ಷ ಗೌಡಳ್ಳಿ ಪೃಥ್ವಿ, ನಿರ್ದೇಶಕ ಕೆ.ಎ. ಪ್ರಕಾಶ್, ಕಲ್ಕಂದೂರು ಗಿರೀಶ್ ಅವರುಗಳು ಇದ್ದರು.