ಮಡಿಕೇರಿ, ಏ. ೨೫: ಕಠಿಣ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಬಹುದು ಎಂದು ತೋರಿಸಿಕೊಟ್ಟ ಭಗೀರಥ ಅವರ ಪ್ರಯತ್ನ ಮನುಕುಲಕ್ಕೆ ಮಾದರಿಯಾಗಿದೆ ಎಂದು ಚಿಂತಕರು ಹಾಗೂ ಸಾಹಿತಿಗಳಾದ ಚಿ.ನಾ. ಸೋಮೇಶ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗಂಗೆಯನ್ನು ಧರೆಗಿಳಿಸಿ ಗಂಗಾ ನದಿಯನ್ನಾಗಿಸಿ ಜನರ ನೀರಿನ ದಾಹ ತೀರಿಸಿದ ಭಗೀರಥರು ಪ್ರಯತ್ನ ಶೀಲತೆಯ ರೂಪಕವಾಗಿ ನಿಲ್ಲುತ್ತಾರೆ. ಅತ್ಯಂತ ಕಠಿಣವಾದ ಅಥವಾ ಅಸಾಧ್ಯವೆನಿಸುವ ಕಾರ್ಯವನ್ನು ಅಚಲವಾದ ಛಲ ಮತ್ತು ನಿರಂತರ ಪರಿಶ್ರಮದಿಂದ ಸಾಧಿಸುವ ಭಗೀರಥ ಅವರ ಪ್ರಯತ್ನದ ಮೂಲಕ ಯುವ ಸಮೂಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕುಶಾಲನಗರದ ಬಿ.ಸಿ. ಶಂಕರಯ್ಯ ಅವರು ಉಪನ್ಯಾಸ ನೀಡಿ, ಭಗೀರಥನು ಪೌರಾಣಿಕ ರಾಜ. ತನ್ನ ಪೂರ್ವಜರ ಭೀಕರ ಅಂತ್ಯವನ್ನು ತಿಳಿದು, ತನ್ನ ಪೂರ್ವಜರಿಗೆ ಸದ್ಗತಿ ಪ್ರಾಪ್ತಿಯಾಗಲಿಲ್ಲವೆಂಬ ವಿಷಾದದಿಂದ ತನ್ನ ಮಂತ್ರಿಗೆ ತನ್ನ ರಾಜ ಕರ್ತವ್ಯ ವಹಿಸಿ ಹಿಮಾಲಯದಲ್ಲಿ ತಪಸ್ಸಿಗೆ ಹೋದನು ಎಂದು ಹೇಳಲಾಗುತ್ತದೆ.
ಭಗೀರಥ ಪ್ರಯತ್ನ ಎಂಬುದು ಇಂದಿಗೂ ಮುಂದೆಯೂ ಪ್ರಸ್ತುತ. ಪ್ರತಿಯೊಬ್ಬರು ತಮ್ಮ ಇತಿಹಾಸ, ಪುರಾಣ, ಹಿಂದೂ ಧರ್ಮಕ್ಕೆ ಗೌರವ ನೀಡಬೇಕು ಎಂದು ಹೇಳಿದರು.
ಭಗೀರಥ ಉಪ್ಪಾರ ಸಮಾಜದ ಗೌರವಾಧ್ಯಕ್ಷ ಬಿ.ಸಿ. ಗೋವಿಂದರಾಜು ಮಾತನಾಡಿ, ಪ್ರಯತ್ನ ಎಂಬುದು ಬಸವಣ್ಣನವರ ತತ್ವ ಕಾಯಕವೇ ಕೈಲಾಸ ಎಂಬAತೆ. ಪ್ರಯತ್ನ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೆ ದೇವರು ಕೊಟ್ಟ ಉಡುಗೊರೆ. ಅದರಿಂದ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು. ಆದ್ದರಿಂದ ಯುವ ಪೀಳಿಗೆ ಪ್ರಯತ್ನಪಟ್ಟರೆ ದೇಶದ ಮುತ್ತುಗಳಾಗಬಹುದು ಎಂದು ಸಲಹೆ ನೀಡಿದರು.
ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, ಎಲ್ಲಾ ಮಹಾತ್ಮರೂ ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ವಿಶ್ವ ಮಾನವರಾಗಿದ್ದಾರೆ. ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲರೂ ಸೇರಿ ಜಯಂತಿ ಆಚರಿಸಿದರೆ ಅರ್ಥಪೂರ್ಣವಾಗಿರುತ್ತದೆ ಎಂದು ಹೇಳಿದರು.
ಉಪ್ಪಾರ ಸಮಾಜದ ಸದಸ್ಯರಾದ ಪೃಥ್ವಿರಾಜ್ ಮಾತನಾಡಿ, ಭಗೀರಥ ಮಹರ್ಷಿ ಅವರು ಅಚಲ ಪ್ರಯತ್ನದಿಂದ ಇಡೀ ಭೂಮಿಯನ್ನೆ ಪಾವನಗೊಳಿಸಿದ್ದಾರೆ. ಭಗೀರಥ ಮಹರ್ಷಿಯ ವಂಶಸ್ಥರೆAದು ಪರಿಗಣಿಸಲ್ಪಡುವ ಉಪ್ಪಾರ ಸಮಾಜವು ಸಾಂಪ್ರದಾಯಿಕವಾಗಿ ಉಪುö್ಪ ತಯಾರಿಕೆ, ಕಲ್ಲು ಕೆಲಸ, ಕೆರೆ ಹೂಳೆತ್ತುವಿಕೆ ಮತ್ತು ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇಂದು ಅತ್ಯಂತ ಹಿಂದುಳಿದ ಸಮುದಾಯವಾಗಿ ಬಂದು ನಿಂತಿದೆ. ಅಲ್ಲದೆ ಸಮುದಾಯದ ಮಂದಿ ವಲಸೆಯಿಂದಾಗಿ ಕಾಲಕ್ರಮೇಣ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಸಮುದಾಯದ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಗೀರಥ ಮಹರ್ಷಿ ಅವರ ಜಯಂತಿ ಆಚರಿಸುವಂತಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜನಾಂಗದ ಅಭಿವೃದ್ಧಿಗೆ ಮುಂದಾಗಬೇಕು. ಯುವಕರು ಮಹರ್ಷಿಯವರ ತತ್ವ, ಆದರ್ಶಗಳನ್ನು ಆಶಾದೀಪವಾಗಿಟ್ಟುಕೊಂಡು ಮುಂದುವರೆಯಬೇಕು ಎಂದರು.
ಸಮಾಜದ ಕಾರ್ಯದರ್ಶಿ ಬಿ.ಎನ್. ಜಗದೀಶ್ ಮಾತನಾಡಿ, ಸರ್ಕಾರದ ವತಿಯಿಂದ ಶ್ರೀ ಭಗೀರಥ ಮಹರ್ಷಿ ಅವರ ಜಯಂತಿಯನ್ನು ಆಚರಿಸುತ್ತಿರುವುದು ಶ್ಲಾಘನೀಯ. ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಾಗರೂಕರಾಗಬೇಕು ಎಂದು ಹೇಳಿದರು.
ತಹಶೀಲ್ದಾರ್ ಶ್ರೀಧರ್ ಅವರು ಉದ್ಘಾಟಿಸಿದರು. ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ವಿ. ಗಿರೀಶ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ಮಡಿಕೇರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಇತರರು ಇದ್ದರು.
ಪ್ರೇಮ ಮತ್ತು ಬಿ.ಸಿ. ಶಂಕರಯ್ಯ ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು. ಮಣಜೂರು ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಅತಿಥಿ ಗಣ್ಯರು ಶ್ರೀ ಮಹರ್ಷಿ ಭಗೀರಥ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.