ಐಗೂರು, ಏ. ೨೪: ಹರದೂರು ಗ್ರಾಮ ಪಂಚಾಯಿತಿಯ ಗರಗಂದೂರು ಬಿ ವ್ಯಾಪ್ತಿಯ ಟರ್ಫ್ ಮೈದಾನದಲ್ಲಿ ಹೊಸ ತೋಟದ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಚಿಟ್ಟಡೆಯ ಸಿವೈಸಿ ತಂಡ ಗೆಲುವು ಸಾಧಿಸಿ ರೂ. ೨೦,೦೦೦ ನಗದು ಮತ್ತು ಆಕರ್ಷಕ ಟ್ರೋಫಿ ಪಡೆದು ಚಾಂಪಿಯನ್‌ಆಗಿ ಹೊರಹೊಮ್ಮಿತು. ಘಟ್ಟದಳ್ಳದ ಸಿಗ್ನೇಚರ್ ಬಾಯ್ಸ್ ತಂಡವು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡು ರೂ. ೧೦,೦೦೦ ನಗದು ಮತ್ತು ಆಕರ್ಷಕ ಟ್ರೋಫಿ ಪಡೆಯಿತು. ಕೆಂಚಮ್ಮನ ಬಾಣೆಯ ಬಿಎಂಎಸ್‌ಎಸ್ ತಂಡವು ತೃತೀಯ ಸ್ಥಾನದೊಂದಿಗೆ ರೂ. ೫,೦೦೦ ನಗದು ಮತ್ತು ಆಕರ್ಷಕ ಟ್ರೋಫಿ, ಪೊನ್ನಂಪೇಟೆಯ ಸಿಸಿಜಿ ತಂಡವು ನಾಲ್ಕನೇ ಸ್ಥಾನ ಗಳಿಸಿ ಟ್ರೋಫಿಯನ್ನು ಪಡೆದುಕೊಂಡಿತು.
ವಾಲಿಬಾಲ್ ಪಂದ್ಯಾಟದಲ್ಲಿ ಒಟ್ಟು ೧೬ ತಂಡಗಳು ಭಾಗವಹಿಸಿದ್ದವು. ಪಂದ್ಯಾಟದ ಬೆಸ್ಟ್ ಪಾಸರ್ ಪ್ರಶಸ್ತಿಯನ್ನು ಸಿಗ್ನೇಚರ್ ಬಾಯ್ಸ್ ತಂಡದ ಶರಣ್, ಬೆಸ್ಟ್ ಅಟ್ಯಾಕ್ ಸಿವೈಸಿ ಚಿಟ್ಟಡೆ ತಂಡದ ಗಣಿ, ಬೆಸ್ಟ್ ಡಿಫೆಂಡರ್ ಸಿಸಿಜಿ ಪೊನ್ನಂಪೇಟೆ ತಂಡದ ಕುಟ್ಟಪ್ಪ ಮತ್ತು ಬೆಸ್ಟ್ ಟೀಮ್ ಪ್ರಶಸ್ತಿಯನ್ನು ಸಿಸಿಜಿ ಪೊನ್ನಂಪೇಟೆ ತಂಡ ಪಡೆಯಿತು. ಸೋಲನುಭವಿಸಿದ ಪ್ರತಿ ತಂಡಗಳಿಗೆ ಕೆ.ಎಂ. ಲಕ್ಷö್ಮಣ ಅವರು ನಗದು ಕಾಣಿಕೆ ನೀಡಿ ಪ್ರೋತ್ಸಾಹಿಸಿದರು. ತೀರ್ಪುಗಾರರಾಗಿ ಅಮೃತ್ ತಾಕೇರಿ ಮತ್ತು ರಾಜೇಶ್ ಸಿದ್ದಲಿಂಗಪುರ ಕಾರ್ಯನಿರ್ವಹಿಸಿದರು. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಾನಿ ಕಲ್ಕಂದೂರಿನ ರಾಜ ಕೃಷ್ಣಕುಮಾರ್ ಭಾಗವಹಿಸಿದ್ದರು. ಸಂಜಯ್, ರಾಜೇಶ್, ಅಜಿತ್, ಅನಿಲ್, ಉಮೇಶ್, ಪ್ರತಾಪ್, ಮತ್ತು ಸಲೀಂ ಹೊಸತೋಟ ಇದ್ದರು.