ವೀರಾಜಪೇಟೆ, ಏ. ೨೪: ಬೇಟೋಳಿ ಗ್ರಾಮ ರಾಮನಗರದ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶ್ರೀ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾ ಚಂಡಿಕಾ ಹೋಮವನ್ನು ನೆರವೇರಿಸಲಾಯಿತು.

ದೇವಸ್ಥಾನದಲ್ಲಿ ಹಬ್ಬದ ಹಿಂದಿನ ದಿವಸವೇ ಸಂಜೆ ಅರ್ಚಕರು ವಿಶೇಷ ಪ್ರಾರ್ಥನೆಯೊಂದಿಗೆ ಪಾರಾಯಣ ನಡೆಸಿದರು. ದೇವಸ್ಥಾನದ ಆವರಣದಲ್ಲಿರುವ ಶ್ರೀ ಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ನಾಗ ಹಾಗೂ ಶ್ರೀ ವನದುರ್ಗೆ ದೇವರುಗಳಿಗೆ ವಿಶೇಷ ಪೂಜೆ, ಮಹಾ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಮಹಾ ಚಂಡಿಕಾ ಹೋಮ, ಸಂಕಲ್ಪ ಪೂಜೆ, ಅಲಂಕಾರ ಪೂಜೆ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇವೆ ನಡೆಯಿತು.

ದಕ್ಷಿಣ ಕನ್ನಡದ ಭರತನಾಟ್ಯ ಕಲಾವಿದೆ ಸುಷ್ಮಾ ಎಸ್. ನಾಯಕ್ ಅವರಿಂದ ಅಷ್ಟಾವಧನ ಸೇವೆಯ ನೃತ್ಯ ನೆರವೇರಿತು. ಶ್ರೀ ವಿನಾಯಕ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನೆ, ರುದ್ರಂ ಚಂಡೆ ಬಳಗದವರಿಂದ ಚಂಡೆ ಸೇವೆ ಹಾಗೂ ವೈದಿಕ ಶಿಬಿರದ ವಟುಗಳಿಂದ ಶ್ಲೋಕ ಪಠಣ ನಡೆಯಿತು. ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ನೆರವೇರಿತು.