ವೀರಾಜಪೇಟೆ, ಏ. ೨೪: ಪ್ರಕೃತಿ ಮತ್ತು ಭೂಮಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ಭೂಮಿಯ ಮೇಲಿರುವ ಸರ್ವರ ಮೇಲಿದೆ ಎಂದು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್. ನಟರಾಜ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ, ಅರಣ್ಯ ಇಲಾಖೆ, ಕಾವೇರಿ ಇನ್ಸಿ÷್ಟಟ್ಯೂಟ್ ಆಫ್ ಲಾ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರನ್ನು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ವಿಶ್ವ ಭೂ ದಿನಾಚರಣೆ ಹಿನ್ನೆಲೆಯಲ್ಲಿ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಆಚರಿಸುವುದು ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು. ಭೂಮಿಯ ಮೇಲಿರುವಂತಹ ಪರಿಸರ, ಅರಣ್ಯ ಸಂಪತ್ತು, ವನ್ಯಜೀವಿ ಹಾಗೂ ಇನ್ನಿತರ ಜೀವ ಸಂಕುಲಗಳನ್ನು ತಾಯಿಯಂತೆ ಪೋಷಿಸುತ್ತಿರುವವಳು ಭೂಮಿ. ಆದ್ದರಿಂದ ಭೂಮಿಯ ರಕ್ಷಣೆಯನ್ನು ಮಾಡುವುದು ಅತಿ ಮುಖ್ಯವಾಗಿದೆ ಎಂದರು.

ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಹೆಚ್. ಜಗನ್ನಾಥ್ ಮಾತನಾಡಿ, ಭೂಮಿಯಲ್ಲಿ ಸಮತೋಲನವನ್ನು ಕಾಪಾಡಲು ಪ್ರತಿಯೊಂದು ಜೀವಿಯು ಅವಶ್ಯಕ. ಪರಿಸರದ ಬಗ್ಗೆ ಸರ್ವರಲ್ಲಿಯೂ ಗೌರವವಿರಲಿ. ಪರಿಸರವನ್ನು ನಾಶಮಾಡುವ ಕೆಲಸ ನಡೆದಂತಹ ಸಂದರ್ಭದಲ್ಲಿ ಅದನ್ನು ವಿರೋಧಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜೀವ ವೈವಿಧ್ಯ ಇದ್ದರೆ ಮಾತ್ರ ವಿಕಸನ ಸಾಧ್ಯ ಎಂದರು. ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಸಿ.ಕೆ. ಪೂವಣ್ಣ ಮಾತನಾಡಿ, ಇಲ್ಲಿರುವ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕು. ಜೀವ ಸಂಕುಲಗಳನ್ನು, ಪರಿಸರವನ್ನು ಸಂರಕ್ಷಣೆ ಮಾಡಬೇಕು ಎಂದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಾಸಿನಾ ಬಾನು ಮಾತನಾಡಿದರು. ಕಾವೇರಿ ಇನ್ಸಿ÷್ಟಟ್ಯೂಟ್ ಆಫ್ ಲಾ ವೀರಾಜಪೇಟೆ ಮುಖ್ಯಸ್ಥ ಜಿ.ಎಸ್. ನಾಗೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಪ್ರದೀಪ್ ಪೋತೆದಾರ್, ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್, ಕಾವೇರಿ ಇನ್ಸಿ÷್ಟಟ್ಯೂಟ್ ಆಫ್ ಲಾ ಪ್ರಾಂಶುಪಾಲೆ ಟಿ.ಕೆ. ವಿನಿತ ಉಪಸ್ಥಿತರಿದ್ದರು.