ಮಡಿಕೇರಿ, ಏ. ೨೪: ತಾಲೂಕಿನ ಹಾಕತ್ತೂರು ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ಬಳಿ ಭೂ ಕುಸಿತ ತಡೆಯುವ ಹಿನ್ನಲೆಯಲ್ಲಿ ೫೦ ಲಕ್ಷ ರೂ ವೆಚ್ಚದ ತಡೆಗೋಡೆ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಇಂದು ಚಾಲನೆ ನೀಡಿದರು.

೨೦೦೨ ರಿಂದಲೇ ಈ ಭಾಗದಲ್ಲಿ ಭೂ ಕುಸಿತವಾಗಿ ಕೃಷಿ ಜಮೀನು ನಾಶವಾಗುವುದಲ್ಲದೆ ಸನಿಹದಲ್ಲಿ ಇರುವ ರಸ್ತೆ ಕೂಡ ಹಾಳಾಗುತ್ತಿದ್ದು ತಡೆಗೋಡೆ ನಿರ್ಮಾಣದ ಮೂಲಕ ರಕ್ಷಣೆ ಮಾಡುವಂತೆ ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದರು. ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಎ.ಎಸ್.ಪೊನ್ನಣ್ಣ ಅವರು ಪ್ರಚಾರಕ್ಕೆ ಬಂದಾಗ ಅಲ್ಲಿನ ನಿವಾಸಿಗಳು ತಡೆಗೋಡೆ ನಿರ್ಮಾಣಕ್ಕೆ ಕೋರಿಕೆ ಸಲ್ಲಿಸಿದ್ದರು.

ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಎ.ಎಸ್.ಪೊನ್ನಣ್ಣನವರು ಗ್ರಾಮಸ್ಥರು ಸಲ್ಲಿಸಿದ ಕೋರಿಕೆಯನ್ನು ಈಡೇರಿಸುವ ಭರವಸೆಯನ್ನು ತಾವು ನೀಡಿದ್ದು ಕೃಷಿ ಭೂಮಿ ರಕ್ಷಣಾ ತಡೆಗೋಡೆ ನಿರ್ಮಾಣಕ್ಕೆ ೧ ಕೋಟಿ ೬೦ ಲಕ್ಷ ರೂಗಳ ವಿಶೇಷ ಅನುದಾನವನ್ನು ಸಣ್ಣ ನೀರಾವರಿ ಇಲಾಖೆಯಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜ್ ಅವರು ಒದಗಿಸಿದ್ದು ಅದರಲ್ಲಿ ೫೦ ಲಕ್ಷ ರೂಗಳನ್ನು ಸದರಿ ಕಾಮಗಾರಿಗೆ ನೀಡಲಾಗಿದೆ ಎಂದು ವಿವರಿಸಿದರು.

ಈ ಸಂಧರ್ಭ ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಹೊಸೂರು ಸೂರಜ್, ತಾ.ಪಂ.ಮಾಜಿ ಸದಸ್ಯ ಅಪ್ರು ರವೀಂದ್ರ, ಸ್ಥಳೀಯ ಮುಖಂಡರಾದ ಪಿಯೂಸ್ ಪರೆರಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯತೀಶ್, ಮಾಜಿ ಸದಸ್ಯೆ ಶೈನಿ, ಪ್ರಮುಖರಾದ ನಾರಾಯಣ್. ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಕುಮಾರ ಸ್ವಾಮಿ ಸೇರಿದಂತೆ ನಿವಾಸಿಗಳು ಉಪಸ್ಥಿತರಿದ್ದರು.