ಪೊನ್ನಂಪೇಟೆ, ಏ. ೨೪: ಪೊನ್ನಂಪೇಟೆ ಕಾಟ್ರಕೊಲ್ಲಿ ನಿವಾಸಿ, ಹಿರಿಯ ಕಾಂಗ್ರೆಸ್ ಮುಖಂಡ, ಸಮಾಜಸೇವಕ ಆಲೀರ ಎರ್ಮು ಹಾಜಿ ಅವರು ತಮ್ಮ ತಂದೆಯ ಜ್ಞಾಪಕಾರ್ಥವಾಗಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಅರ್ಹ ವಿಶೇಷಚೇತನರಿಗೆ ತಲಾ ೬ ಸಾವಿರ ರೂಪಾಯಿ ಮೌಲ್ಯದ ೧೦ ವೀಲ್‌ಚೇರ್‌ಗಳನ್ನು ಕೊಡುಗೆಯಾಗಿ ನೀಡಿದರು.

ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದ ಹೊನ್ನಿಕೊಪ್ಪಲುವಿನಲ್ಲಿ ಆಶಾ ಕಾರ್ಯಕರ್ತೆ ಪೆಮ್ಮಂಡ ಸುಮನ್ ಅವರ ನೇತೃತ್ವದಲ್ಲಿ ೨ ವೀಲ್‌ಚೇರ್, ಚೆನ್ನಂಗೊಲ್ಲಿ ಪೈಸಾರಿಯಲ್ಲಿ ಅಮೀನಾ ಅವರ ನೇತೃತ್ವದಲ್ಲಿ ೨ ವೀಲ್‌ಚೇರ್, ವೀರಾಜಪೇಟೆಯಲ್ಲಿ ೨ ವೀಲ್‌ಚೇರ್, ಆರಮೇರಿಯಲ್ಲಿ ೧ ವೀಲ್‌ಚೇರ್, ಎಮ್ಮೆಮಾಡುವಿನಲ್ಲಿ ೨ ವೀಲ್‌ಚೇರ್ ಹಾಗೂ ವೀರಾಜಪೇಟೆಯ ಅನ್ವರುಲ್ ಹುದಾ ಪಬ್ಲಿಕ್ ಶಾಲೆಗೆ ೧ ವೀಲ್‌ಚೇರ್‌ಅನ್ನು ಕೊಡುಗೆಯಾಗಿ ನೀಡಿದರು. ನಡೆಯಲು ಸಾಧ್ಯವಿಲ್ಲದಂತ ವಿಶೇಷಚೇತನರನ್ನು ಗುರುತಿಸಿ, ಅವರಿರುವ ಸ್ಥಳಕ್ಕೆ ತೆರಳಿ ಉಚಿತವಾಗಿ ವೀಲ್‌ಚೇರ್ ಕೊಡುವ ಮೂಲಕ ಆಲೀರ ಎರ್ಮು ಹಾಜಿ ಅವರು ವಿಶೇಷಚೇತನರಲ್ಲಿ ಆಶಾಕಿರಣ ಮೂಡಿಸಿ ಮಾನವೀಯತೆ ಮೆರೆದರು.

ಈ ಸಂದರ್ಭ ಆಶಾ ಕಾರ್ಯಕರ್ತೆ ಪೆಮ್ಮಂಡ ಸುಮಾ ಅವರು ಮಾತನಾಡಿ, ಸಮಾಜಸೇವಕ ಎರ್ಮು ಹಾಜಿ ಅವರು ತಮ್ಮ ತಂದೆಯ ಜ್ಞಾಪಕಾರ್ಥವಾಗಿ ಕಷ್ಟದಲ್ಲಿರುವ ವಿಶೇಷಚೇತನರಿಗೆ ವೀಲ್‌ಚೇರ್‌ಗಳನ್ನು ಕೊಡುಗೆಯಾಗಿ ನೀಡಿದ್ದು, ಈ ಕುರಿತು ಕಿರುಗೂರಿನಲ್ಲಿರುವ ಇಬ್ಬರು ವಿಶೇಷಚೇತನರಿಗೆ ವೀಲ್‌ಚೇರ್‌ನ ಅವಶ್ಯಕತೆ ಇರುವುದನ್ನು ತಿಳಿಸಿದ ಮೇರೆಗೆ ವಿಶೇಷಚೇತನರು ಇರುವ ಸ್ಥಳಕ್ಕೆ ಆಲೀರ ಎರ್ಮು ಹಾಜಿ ಅವರು ಆಗಮಿಸಿ ವೀಲ್‌ಚೇರ್ ವಿತರಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚೆನ್ನಂಗೊಲ್ಲಿ ಪೈಸಾರಿ ನಿವಾಸಿ ಅಮೀನಾ ಅವರು ಮಾತನಾಡಿ, ನಿರ್ಗತಿಕರ ಹಾಗೂ ವಿಶೇಷಚೇತನರ ಮುಂದಿನ ಭವಿಷ್ಯವನ್ನು ನೆನಪಿನಲ್ಲಿ ಇಟ್ಟುಕೊಂಡು ಅವರಿಗೆ ಸಹಾಯವಾಗುವಂತಹ ವೀಲ್‌ಚೇರ್ ವಿತರಣೆ ಮಾಡುವ ಮೂಲಕ ಆಲೀರ ಎರ್ಮು ಹಾಜಿ ಅವರು ಮಾನವೀಯತೆ ಮೆರೆದಿದ್ದಾರೆ ಎಂದರು.

ದಾನಿ, ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಸಮಾಜಸೇವಕ ಎರ್ಮು ಹಾಜಿ ಅವರು ಮಾತನಾಡಿ, ನನ್ನ ತಂದೆಯ ಜ್ಞಾಪಕಾರ್ಥವಾಗಿ ಕಷ್ಟದಲ್ಲಿರುವ ವಿಶೇಷಚೇತನರಿಗೆ ವೈಯಕ್ತಿಕವಾಗಿ ೧೦ ವೀಲ್‌ಚೇರ್‌ಗಳನ್ನು ಕೊಡುಗೆಯಾಗಿ ನೀಡಿದ್ದೇನೆ ಎಂದರು.