ಸೋಮವಾರಪೇಟೆ, ಏ. ೨೪ : ತಾಲೂಕು ಒಕ್ಕಲಿಗರ ಸಂಘ ಮತ್ತು ತಾಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ಕಾಫಿ ತೋಟಗಳ ಮಣ್ಣಿನ ಪರೀಕ್ಷೆ ಮತ್ತು ಮಾಹಿತಿ ಕಾರ್ಯಾಗಾರ ತಾ. ೨೭ರಂದು ಒಕ್ಕಲಿಗರ ಸಮುದಾಯಭವನದಲ್ಲಿ ನಡೆಯಲಿದೆ ಎಂದು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಣ್ಣು ಪರೀಕ್ಷೆ ಮಾಡಿದರೆ ಮಣ್ಣಿನ ಅರೋಗ್ಯದ ಬಗ್ಗೆ ಮಾಹಿತಿ ಸಿಗುತ್ತದೆ. ಮಣ್ಣು ಪರೀಕ್ಷೆ ಮಾಡಿದ ತಕ್ಷಣದಲ್ಲಿ ಪಿ.ಎಚ್.ಮೌಲ್ಯ ತಿಳಿಸಲಾಗುತ್ತದೆ. ರಸಗೊಬ್ಬರ, ಲಘು ಪೋಷಕಾಂಶಗಳನ್ನು ಮಣ್ಣಿಗೆ ನೀಡುವ ಬಗ್ಗೆ ಕಾಫಿ ಸಂಶೋಧನ ವಿಭಾಗದ ವಿಜ್ಞಾನಿಗಳು ಮಾಹಿತಿಯನ್ನು ನೀಡಲಿದ್ದಾರೆ.

ಬೆಳೆಗಾರರು ತಮ್ಮ ತೋಟಗಳ ೩-೪ ಸ್ಥಳಗಳಿಂದ ಮಣ್ಣು ತೆಗೆದು ಮಿಶ್ರಣ ಮಾಡಿ ನಾಲ್ಕರ ಒಂದು ಭಾಗದ ಮಣ್ಣನ್ನು ಬಿಳಿಬಟ್ಟೆಯಲ್ಲಿ ಸಂಗ್ರಹಿಸಿ ತರಬೇಕು. ಮಣ್ಣು ತೆಗೆಯುವಾಗ ಮರದ ಬುಡದಲ್ಲಿ ಮತ್ತು ತೇವಾಂಶವಿರುವ ಜಾಗವನ್ನು ಹೊರತುಪಡಿಸಿ ಬಿಸಿಲು ಬೀಳುವ ಜಾಗದಲ್ಲಿ ಮಣ್ಣು ತೆಗೆಯಬೇಕು

ಕಾಫಿ ಬೆಳೆಗಾರರು ತಮ್ಮ ಕಾಫಿ ತೋಟದ ಜಾಗದ ಆರ್‌ಟಿಸಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ತರಬೇಕು ಎಂದು ಹೇಳಿದರು. ವ್ಯಾಟ್ಸ್ಪ್ ಫೋನ್ ನಂಬರ್ ನೀಡಿದರೆ, ಮಣ್ಣಿನ ಪರೀಕ್ಷೆಯ ಪೂರ್ಣ ಮಾಹಿತಿ ಮೊಬೈಲ್‌ಗೆ ತಲುಪುತ್ತದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಮನೋಹರ್, ಕಾಫಿ ಬೆಳೆಗಾರರ ಒಕ್ಕೂಟದ ಸದಸ್ಯ ಸಿ.ಕೆ.ಮಲ್ಲಪ್ಪ, ಪದಾಧಿಕಾರಿಗಳಾದ ಬಿ.ಎಸ್.ಅನಂತರಾಮ್, ಎಸ್.ಎನ್.ಸೋಮಶೇಖರ್ ಇದ್ದರು.