ಮಡಿಕೇರಿ ಏ. ೨೪ : ಪ್ರತಿಭೆ ಮತ್ತು ಕ್ರೀಡಾ ಚೈತನ್ಯ ಹೊಮ್ಮಿಸಿದ ಸಮಾಗಮ ಬೇಸಿಗೆ ಶಿಬಿರ ವಿವಿಧ ಕಲಾ ಪ್ರದರ್ಶನದೊಂದಿಗೆ ಸಮಾಪನಗೊಂಡಿತು. ನಗರದ ಕೊಡಗು ವಿದ್ಯಾಲಯದಲ್ಲಿ ೨೨ ದಿನಗಳಿಂದ ನಡೆದ ಸಮಾಗಮ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭಕ್ಕೆ ವಿಜೃಂಭಣೆಯ ತೆರೆ ಬಿದ್ದಿತು.

ಮುಖ್ಯ ಅತಿಥಿಯಾಗಿ ಪ್ರಸಿದ್ಧ ಪಿಕಲ್‌ಬಾಲ್ ತರಬೇತುದಾರರು ಹಾಗೂ ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಸಂಘದ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಮತ್ತು ಏಷ್ಯಾ ಪಿಕಲ್‌ಬಾಲ್ ಮಹಾಸಂಘದ ಉಪಾಧ್ಯಕ್ಷ ರಜತ್ ಕಂಕರ್ ಎಂ. ಆರ್ ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಜತ್ ಕಂಕರ್, ಪೋಷಕರು ಮಕ್ಕಳೊಂದಿಗೆ ಸಮಯ ಕಳೆಯಬೇಕು ಹಾಗೂ ಅವರೊಂದಿಗೆ ಆಟವಾಡಬೇಕು ಎಂಟು ವರ್ಷ ಮೇಲ್ಪಟ್ಟವರು ಪಿಕಲ್‌ಬಾಲ್ ಕ್ರೀಡೆಗಳಲ್ಲಿ ಭಾಗವಹಿಸಬಹುದು

ಈ ಕ್ರೀಡೆಯಲ್ಲಿ ಹಲವಾರು ವಿಭಾಗಗಳಿದ್ದು ಎಲ್ಲರಿಗೂ ಅವಕಾಶಗಳಿವೆ ಎಂದರು. ೨೧ ದಿನಗಳ ಸಮಾಗಮ ಶಿಬಿರದಲ್ಲಿ ೨೪೦ ಮಕ್ಕಳು ಭಾಗವಹಿಸಿ, ವಿವಿಧ ಕ್ರೀಡೆ, ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಪಿಕಲ್‌ಬಾಲ್, ಬಾಸ್ಕೆಟ್‌ಬಾಲ್, ಕ್ರಿಕೆಟ್, ಹಾಕಿ, ಹ್ಯಾಂಡ್‌ಬಾಲ್, ಟೇಬಲ್ ಟೆನ್ನಿಸ್, ಚದುರಂಗ, ಸ್ಕೆಟ್‌ಬೋರ್ಡಿಂಗ್ ಮತ್ತು ಕರಾಟೆ ಮುಂತಾದ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಅಭಿವೃದ್ಧಿಗೆ ಉತ್ತೇಜನ ನೀಡಿದವು. ಕಲೆ ಮತ್ತು ಕೈಗಾರಿಕಾ ವಿಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ಸೃಜನಾತ್ಮಕತೆಯನ್ನು ಪ್ರದರ್ಶಿಸಿದರು. ಮಕ್ಕಳಿಂದ ವಿವಿಧ ಭಂಗಿಯ ಯೋಗಾಭ್ಯಾಸ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊAಡರು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ಮೆರುಗು ನೀಡಿದವು.

ವಿದ್ಯಾರ್ಥಿಗಳು ಭರತನಾಟ್ಯ ಹಾಗೂ ಬಿಹು ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮನಸೆಳೆದರು. ಕರಾಟೆ ಪ್ರದರ್ಶನವೂ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ತೋರಿಸಿತು. ಆರ್ಟ್ ಮತ್ತು ಕ್ರಾಫ್ಟ್ ವಿಭಾಗ ಹಾಗೂ ಕಿಡ್ಸ್ ಫೆಸ್ಟ್ ಮಕ್ಕಳಿಂದ ತಯಾರಿಸಲಾದ ವಿವಿಧ ಕಲಾಕೃತಿಗಳ ಪ್ರದರ್ಶನವನ್ನು ಮುಖ್ಯ ಅತಿಥಿಗಳು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊAಡರು. ಶಾಲಾ ಪ್ರಾಂಶುಪಾಲರಾದ ಸುಮಿತ್ರ ಕೆ. ಎಸ್., ಆಡಳಿತ ವ್ಯವಸ್ಥಾಪಕ ರವಿ ಪಿ., ಆಡಳಿತ ಮಂಡಳಿ ಸದಸ್ಯರು, ತರಬೇತುದಾರರು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಬಿಂಧು ಕೆ. ಎಚ್ ಶಿಬಿರದ ಕುರಿತು ವರದಿ ವಾಚಿಸಿದರು. ದಕ್ಷ ಎನ್ ನಿರೂಪಿಸಿ, ಅತಿಥಿಗಳ ಪರಿಚಯವನ್ನು ತೃಪ್ತಿ ಟಿ. ಎನ್ ಮಾಡಿದರು. ಶೌರ್ಯ ಪೂಣಚ್ಚ ಸ್ವಾಗತಿಸಿ, ರಾಶಿ ಆರ್ ವಂದಿಸಿದರು.