ಮಡಿಕೇರಿ, ಏ. ೨೪ : ಐಸಿಎಆರ್-ಐಐಎಸ್ಆರ್ ವಿಜ್ಞಾನಿಗಳಿಂದ ಮರಗೋಡಿನಲ್ಲಿ ಕಾಳುಮೆಣಸು ಕೃಷಿಯಲ್ಲಿ ವೈಜ್ಞಾನಿಕ ಪೋಷಕಾಂಶಗಳ ನಿರ್ವಹಣೆ ಜಾಗೃತಿ ಅಭಿಯಾನ ನಡೆಯಿತು.
ವಿಜ್ಞಾನ ಆಧಾರಿತ ಪೋಷಕಾಂಶ ಮತ್ತು ಇತರ ಪರಿಕರಗಳ ಅಳವಡಿಕೆಯ ಜಾಗೃತಿ ಅಭಿಯಾನದ ಅಂಗವಾಗಿ ಮರಗೋಡು ಗ್ರಾಮದ ಶ್ರೀಮತಿ ಪ್ರೇಮ ಗಣೇಶ್ ಅವರ ತೋಟದಲ್ಲಿ ಐ.ಸಿ.ಎ.ಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಪ್ರಾದೇಶಿಕ ಕೇಂದ್ರ, ಅಪ್ಪಂಗಲದ ವಿಜ್ಞಾನಿಗಳ ತಂಡವು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮವು ವಿಶೇಷವಾಗಿ ಕಾಳು ಮೆಣಸು ಬೆಳೆಯ ಉತ್ಪಾದಕತೆಯನ್ನು ಹೆಚ್ಚಿಸಲು ಶಾಶ್ವತ ಮತ್ತು ವೈಜ್ಞಾನಿಕ ಕೃಷಿ ಕ್ರಮಗಳನ್ನು ರೈತರಿಗೆ ಪರಿಚಯಿಸುವ ಉದ್ದೇಶವನ್ನು ಹೊಂದಿತ್ತು.
“ಕಾಳು ಮೆಣಸು ಬೆಳವಣಿಗೆ ಮತ್ತು ಉತ್ಪಾದನೆಯಲ್ಲಿ ಜೈವಿಕ ಗೊಬ್ಬರಗಳು ಮತ್ತು ಸೂಕ್ಷ್ಮ ಪೋಷಕಾಂಶಗಳ ಮಹತ್ವ” ಎಂಬ ವಿಷಯದ ಬಗ್ಗೆ ತಾಂತ್ರಿಕ ಅಧಿವೇಶನವನ್ನು ಡಾ. ರಾಜಣ್ಣ ಜಿ. ಎ., ಡಾ. ಅಕ್ಷಿತಾ ಎಚ್. ಜೆ., ಮತ್ತು ಡಾ. ಗಾಯತ್ರಿ ಜಿ. ಎನ್. ಅವರು ನಡೆಸಿದರು. ವಿಜ್ಞಾನಿಗಳು ಜೈವಿಕ ಗೊಬ್ಬರಗಳು ಮತ್ತು ಜೀವಾಮೃತದ ಪಾತ್ರವನ್ನು ವಿವರಿಸಿ, ಅವುಗಳು ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುವುದು ಹಾಗೂ ಮಣ್ಣಿನ ಸೂಕ್ಷ್ಮಜೀವಾಣುಗಳ ಚಟುವಟಿಕೆಯನ್ನು ಸುಧಾರಿಸುವ ಬಗ್ಗೆ ಮಾಹಿತಿ ನೀಡಿದರು. ಸೂಕ್ಷ್ಮ ಪೋಷಕಾಂಶಗಳು ಸಸ್ಯಗಳ ಬೆಳವಣಿಗೆ, ಉತ್ಪಾದನೆ ಮತ್ತು ಒತ್ತಡ ತಾಳುವ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಾಯಕವೆಂದು ತಿಳಿಸಿದರು.
ಕಾಳು ಮೆಣಸಿನ ನರ್ಸರಿ ತಂತ್ರಜ್ಞಾನಗಳು ಮತ್ತು ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ವಿಜ್ಞಾನಿಗಳು ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಉತ್ತಮ ಉತ್ಪಾದನೆಯನ್ನು ಗಳಿಸಲು ಜೈವಿಕ ಗೊಬ್ಬರಗಳು, ಬಯೋಕ್ಯಾಪ್ಸೂö್ಯಲ್ಗಳು ಮತ್ತು ಸೂಕ್ಷö್ಮ ಪೋಷಕಾಂಶಗಳ ಸಮಗ್ರ ಬಳಕೆಯ ಮಹತ್ವವನ್ನು ತಿಳಿಸಿದರು.
ಸಮತೋಲನ ಪೋಷಕಾಂಶ ಬಳಕೆಯನ್ನು ಉತ್ತೇಜಿಸಲು ಕಾಳು ಮೆಣಸು ಸೂಕ್ಷ್ಮ ಪೋಷಕಾಂಶ ಮಿಶ್ರಣವನ್ನು ರೈತರಿಗೆ ವಿತರಿಸಲಾಯಿತು. ಸುಮಾರು ೩೦ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.