ಕುಶಾಲನಗರ, ಏ. ೨೨: ಬಿರು ಬೇಸಿಗೆಯಿಂದ ಮತ್ತೆ ಕಾವೇರಿ ನದಿ ಒಡಲು ಬತ್ತಿ ಹೋಗುತ್ತಿದೆ. ಕಳೆದ ಎರಡು ವಾರಗಳಿಂದ ಕುಶಾಲನಗರ ವ್ಯಾಪ್ತಿಯ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಬಹುತೇಕ ಕ್ಷೀಣಿಸಿದೆ. ಇದೀಗ ಕುಶಾಲನಗರ ಕಾವೇರಿ ಸೇತುವೆ ಕೆಳಭಾಗದಲ್ಲಿ ಕೇವಲ ಬಂಡೆಗಳು ಮಾತ್ರ ಗೋಚರಿಸುತ್ತಿವೆ. ಕುಶಾಲನಗರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಬೈಚನಹಳ್ಳಿ ಪಂಪ್ ಹೌಸ್ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಮರಳು ಚೀಲಗಳ ಬಂಡ್ ಅಳವಡಿಸಲಾಗಿದ್ದು ನೀರಿನ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪಟ್ಟಣದಲ್ಲಿ ಇರುವ ಕೊಳವೆ ಬಾವಿಗಳ ನಿರ್ವಹಣೆ ಕಾಮಗಾರಿ ನಡೆಯುತ್ತಿದೆ ಎಂದು ಪುರಸಭೆ ಮುಖ್ಯ ಅಧಿಕಾರಿ ಗಿರೀಶ್ ತಿಳಿಸಿದ್ದಾರೆ.

ಈ ನಡುವೆ ದುಬಾರೆ ಪ್ರವಾಸಿ ಕೇಂದ್ರದಲ್ಲಿ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಕಡಿಮೆ ಆಗಿದ್ದು ರ‍್ಯಾಪ್ಟಿಂಗ್ ಕ್ರೀಡೆ ಸ್ಥಗಿತಗೊಂಡಿದ್ದು, ಬಳಸುತ್ತಿದ್ದ ರ‍್ಯಾಫ್ಟ್ಗಳು ನದಿ ತಟ ಸೇರಿವೆ. ಪ್ರವಾಸಿಗರು ದುಬಾರೆ ಸಾಕಾನೆ ಶಿಬಿರಕ್ಕೆ ನದಿಯಲ್ಲಿ ಹಾಕಿರುವ ಮರಳು ಚೀಲಗಳ ಮೇಲೆ ನದಿ ದಾಟಿ ತೆರಳುತ್ತಿರುವ ದೃಶ್ಯ ಕಾಣಬಹುದು.

- ಚಂದ್ರಮೋಹನ್