ಗೋಣಿಕೊಪ್ಪಲು. ಏ. ೨೨: ಪೋಷಕರು ತಮ್ಮ ಮಕ್ಕಳನ್ನು ಕ್ರೀಡೆಗೆ ಅಣಿಗೊಳಿಸಿದರೆ ಮುಂದೆ ಸಾಕಷ್ಟು ಅವಕಾಶಗಳು ಮಕ್ಕಳನ್ನು ಹುಡುಕಿಕೊಂಡು ಬರುತ್ತವೆ ಎಂದು ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್. ಅರುಣ್ ಮಾಚಯ್ಯ ಹೇಳಿದರು.

ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಕಳೆದ ೨೧ ದಿನಗಳಿಂದ ನಡೆದ ಹಾಕಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ಸರ್ಟಿಫಿಕೆಟ್‌ಗಳನ್ನು ವಿತರಿಸಿ ಮಾತನಾಡಿದ ವಿವಿಧ ರೀತಿಯ ಕ್ರೀಡೆಗಳಿಗೆ ಕೊಡಗಿನಲ್ಲಿ ವಿಫುಲ ಅವಕಾಶವಿದೆ. ವಿಶೇಷವಾಗಿ ಹಾಕಿ ಕ್ರೀಡೆಗೆ ಹೆಸರುವಾಸಿಯಾದ ಕೊಡಗಿನಲ್ಲಿ ಬೇಸಿಗೆ ಶಿಬಿರಗಳು ವಿವಿಧ ಭಾಗದಲ್ಲಿ ನಡೆಯುತ್ತಿವೆ.

ಇದರ ಪ್ರಯೋಜನವನ್ನು ಪೋಷಕರು ಮಕ್ಕಳಿಗೆ ನೀಡುವಂತಾಗಬೇಕು. ಮೊಬೈಲ್ ಗುಂಗಿನಲ್ಲಿಯೇ ಇರುವ ಮಕ್ಕಳನ್ನು ಅದರಿಂದ ಹೊರತರುವ ಮೂಲಕ ಕ್ರೀಡೆಯಲ್ಲಿ ಸಕ್ರೀಯಗೊಳಿಸಬೇಕು ಎಂದರು.

ಹಾಕಿ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಮಾತನಾಡಿ ಕೊಡಗಿನಲ್ಲಿ ಹಾಕಿಯ ಮೂಲಕ ಹೆಸರು ಮಾಡಿ ರಾಷ್ಟç ಮಟ್ಟದಲ್ಲಿ ಒಲಂಪಿಯನ್‌ಗಳಾಗಿ ಹೊರ ಹೊಮ್ಮಿ ವಿವಿಧ ಹುದ್ದೆಯಲ್ಲಿ ಇರುವ ಕೊಡಗಿನ ಒಲಂಪಿಯನ್‌ಗಳು ಕೊಡಗಿನ ಮಕ್ಕಳ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು.

ಪ್ರತಿಯೊಬ್ಬ ಒಲಂಪಿಯನ್‌ಗಳು ಆಸಕ್ತರಿಗೆ ಪೂರಕವಾಗಿ ಸವಲತ್ತುಗಳನ್ನು ವೈಯಕ್ತಿಕವಾಗಿ ನೀಡುವಂತಾಗಬೇಕು ಇದರಿಂದ ಕೊಡಗಿನ ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶಗಳು ಹೆಚ್ಚಾಗಲಿದೆ ಎಂದರು.

ಒಲಂಪಿಯನ್ ಸಿ.ಎಸ್. ಪೂಣಚ್ಚ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಡಗಿನಿಂದ ಆಯ್ಕೆಗೊಂಡು ಭಾರತ ತಂಡವನ್ನು ಪ್ರತಿನಿಧಿಸಿ ಒಲಂಪಿಯನ್ ಆಗಿ ಹೊರ ಹೊಮ್ಮಿದ ನಂತರ ಕೊಡಗಿನ ಮಕ್ಕಳಿಗಾಗಿ ಸಣ್ಣ ಪ್ರಮಾಣದಲ್ಲಿ ಪ್ರಯೋಜನಕಾರಿಯಾಗಲು ಬೇಸಿಗೆ ಶಿಬಿರವನ್ನು ಟರ್ಪ್ ಮೈದಾನದಲ್ಲಿ ಆಯೋಜಿಸಿ ನುರಿತ ಅನುಭವಿ ತರಬೇತುದಾರರಿಂದ ತರಬೇತಿಯನ್ನು ನೀಡಲಾಗಿದೆ.ಇದರಿಂದ ಪ್ರತಿಭಾವಂತ ಕ್ರೀಡಾಪಟುಗಳು ಹೊರಹೊಮ್ಮುವ ವಿಶ್ವಾಸವಿದೆ ಎಂದರು.

ಪ್ರತಿ ವಿದ್ಯಾರ್ಥಿಗೂ ಪ್ರಸಂಶ ಪತ್ರವನ್ನು ವಿತರಿಸಲಾಯಿತು.

ಒಲಂಪಿಯನ್ ಸಿ.ಎಸ್. ಪೂಣಚ್ಚ ಅವರನ್ನು ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಿದರು.

ಶಿಬಿರದಲ್ಲಿ ಕುಪ್ಪಂಡ ಸುಬ್ಬಯ್ಯ, ತೀತಮಾಡ ಭರತ್, ಮೂಕಳಮಾಡ ಗಣಪತಿ, ಹಾಕಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಕೂರ್ಗ್ ಚಾಲೆಂಜರ್ಸ್ನ ಪಟ್ರಂಗಡ ಶ್ರೀಮಂತ್, ಗುಮ್ಮಟ್ಟಿರ ಮುತ್ತಣ್ಣ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.