ಪೊನ್ನಂಪೇಟೆ, ಏ. ೨೨: ಬೆಂಗಳೂರು ಕೊಡವ ಸಮಾಜ, ಕಾವೇರಿ ಪ್ಲೇಸ್ ಮೆಂಟ್ ಸೆಲ್ ಬೆಂಗಳೂರು, ಎಡೆಕೋ ಇಂಡಿಯಾ ಹಾಗೂ ಗೋಣಿಕೊಪ್ಪಲು ಕಾವೇರಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ, ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಆಯ್ಕೆಯಾದ ೧೧೨ ಅಭ್ಯರ್ಥಿಗಳು ಸ್ಥಳದಲ್ಲೇ ಉದ್ಯೋಗ ನೇಮಕಾತಿ ಪತ್ರ ಪಡೆದುಕೊಂಡರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಚಿರಿಯಪಂಡ ಎಸ್. ಸುರೇಶ್ ನಂಜಪ್ಪ ಮಾತನಾಡಿ ಕೊಡಗಿನ ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ಕೊಡಗಿನಲ್ಲಿ ಈ ಬಾರಿ ಉದ್ಯೋಗ ಮೇಳ ನಡೆಸಿದ್ದೇವೆ ಎಂದರು. ಎಡೆಕೊ ಇಂಡಿಯಾ ಕಂಪನಿ ನಿರ್ದೇಶಕರಾದ ಕೊಂಗAಡ ಜಿ. ಸಂಕೇತ್ ಚಂಗಪ್ಪ ಮಾತನಾಡಿ, ಎಡೆಕೊ ಇಂಡಿಯಾ ಕಂಪನಿಯಿAದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ನೀಡಲಾಗುತ್ತಿದೆ. ಬೆಂಗಳೂರು ಕೊಡವ ಸಮಾಜ ಸಹಯೋಗದಲ್ಲಿ ಕೊಡಗಿನಲ್ಲಿ ಎರಡು ಉದ್ಯೋಗಮೇಳ ನಡೆಸಲಾಗಿದ್ದು, ತಾ. ೧೩ ರಂದು ಮಡಿಕೇರಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ೬೫ ಅಭ್ಯರ್ಥಿಗಳು, ತಾ. ೧೮ ರಂದು ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ೧೧೨ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ನೇಮಕಾತಿ ಪತ್ರ ನೀಡಲಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ ಮಾತನಾಡಿ ಬೆಂಗಳೂರು ಕೊಡವ ಸಮಾಜ ಹಾಗೂ ಎಡೆಕೊ ಇಂಡಿಯಾ ಕಂಪೆನಿ ಕೊಡಗಿನಲ್ಲಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ಕೊಡಗಿನ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಮಾಡಿಕೊಟ್ಟಿರುವುದು ಉತ್ತಮ ಬೆಳವಣಿಗೆ ಎಂದು ಈ ಸಂದರ್ಭ ಕೊಡವ ಸಮಾಜ ಕಾರ್ಯದರ್ಶಿ ಮಧು ಅಯ್ಯಣ್ಣ, ಕಾವೇರಿ ಪ್ಲೇಸ್ ಮೆಂಟ್ ಸೆಲ್‌ನ ಚೇರ್ಮನ್ ಪೆಮ್ಮಂಡ ಎಂ. ಕಿಶನ್ ಕಾವೇರಪ್ಪ, ಎಡೆಕೊ ಇಂಡಿಯಾ ನಿರ್ದೇಶಕರಾದ ದೀಪೇಶ್ ಗುಪ್ತ, ಕಾವೇರಿ ಕಾಲೇಜು ಪ್ಲೇಸ್ ಮೆಂಟ್ ಸೆಲ್ ಅಧಿಕಾರಿ ಯು. ಟಿ. ಪೆಮ್ಮಯ್ಯ, ಬೆಂಗಳೂರು ಕೊಡವ ಸಮಾಜ ಪದಾಧಿಕಾರಿಗಳು, ಸದಸ್ಯರು, ಕಾವೇರಿ ಪ್ಲೇಸ್ ಮೆಂಟ್ ಸೆಲ್ ಸದಸ್ಯರು ಹಾಜರಿದ್ದರು. ಎಡೆಕೊ ಇಂಡಿಯಾ ಕಂಪನಿಯ ಅಧಿಕಾರಿ ಗುಣಶೇಖರ್ ಮತ್ತು ತಂಡ ಅಭ್ಯರ್ಥಿಗಳ ಸಂದರ್ಶನ ಮಾಡಿತು.