ಮಡಿಕೇರಿ, ಏ. ೨೨: ಕೊಡಗು ಜಿಲ್ಲೆಯ ಕೃಷಿಕರು ಹಾಗೂ ಕಾಫಿ ಬೆಳೆಗಾರರ ಬದುಕು ಬಾಣಲೆಯಿಂದ ಬೆಂಕಿಗೆ ಬೀಳುತ್ತಿರುವುದು ಮೊದಲೇನಲ್ಲ. ಇದೇ ಕೊನೆಯಾಗಲಿ ಎಂಬ ಆಶಯವೂ ಹೊಸದೇನಲ್ಲ......

ಜಿಲ್ಲೆಯ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕದೆ ರೈತರ ಬದುಕು ಬಿಡಿಸಿಕೊಳ್ಳಲಾಗದ ಯಾತನೆಗಳಿಂದ ಜೀವನ ನಡೆಸುವಂತಾಗಿದೆ.

೧. ಪೌತಿ ಖಾತೆಗಳು: ಈ ಸಮಸ್ಯೆ ಕೆಲ ವರ್ಗದ ರೈತರಿಗೆ ಇತ್ತೀಚಿಗಿನ ದಿನಗಳಲ್ಲಿ ಸಹಾಯ ಆಗುತ್ತಿದೆ. ಕೆಲ ತಾಂತ್ರಿಕ ಸಮಸ್ಯೆಗಳಿಂದ ಅನೇಕ ರೈತ ಕುಟುಂಬಗಳು ಇನ್ನು ಅಲೆದಾಡುವ ಪರಿಸ್ಥಿತಿ ಮುಂದುವರಿಯುತ್ತಿದೆ. ಕಛೇರಿಗಳಲ್ಲಿ ಸಿಬ್ಬಂದಿಗಳ ಕೊರತೆ, ಗೈರುಹಾಜರಿ ಮತ್ತು ವಿಶೇಷವಾಗಿ ಸರ್ವರ್ ಸಮಸ್ಯೆಗಳು ರೈತರ ಸಮಯವನ್ನು ಪೋಲು ಮಾಡುತ್ತಿವೆ.

೨. ಜಮ್ಮಾ ಬಾಣೆ ಸಮಸ್ಯೆ: ಇದು ಜಿಲ್ಲೆಯ ಮಟ್ಟಿಗೆ ಇರುವ ಸಮಸ್ಯೆಯಾದರೂ ಇತ್ತೀಚಿಗೆ ಸಮಸ್ಯೆ ಪರಿಹಾರವಾಗಿದೆ ಎನ್ನಲಾಗುತ್ತಿದೆಯಾದರೂ ಈ ಬಗ್ಗೆ ಇನ್ನು ಪೂರ್ಣ ಸ್ಪಷ್ಟತೆ ದೊರಕಿಲ್ಲ.

೩. ಸಹಕಾರ ಸಂಘಗಳಲ್ಲಿ ಬಡ್ಡಿ ರಹಿತ ಸಾಲಗಳು ೩ ಲಕ್ಷದಿಂದ ೫ ಲಕ್ಷದವರೆಗೆ ಸಾಲ ಸೌಲಭ್ಯ ದೊರಕಬೇಕು. ಆದರೆ ರೈತರ ಭೂದಾಖಲೆಗಳ ಸಮಸ್ಯೆ ಹಾಗೂ ರಾಜ್ಯ ಸರಕಾರದ ಸುತ್ತೋಲೆಗಳಿಂದ ಶೇ.೩೦ ರಷ್ಟು ರೈತರು ಈ ವರ್ಗದ ಸಾಲ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅನಿವಾರ್ಯವಾಗಿ ತಿಳುವಳಿಕೆ ಕೊರತೆಯಿಂದ ಸಾಲ ಪಡೆದ ರೈತರು ೧೦.೫% ಬಡ್ಡಿ ತೆರಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಖಾಸಗಿ ಬ್ಯಾಂಕ್ ಗಳಲ್ಲಿ ಕೇವಲ ೭% ಬಡ್ಡಿಗೆ ಸಾಲ ಸಿಗುತ್ತದೆ. ಇದರಿಂದಾಗಿ ರೈತರು ಸಹಕಾರ ಸಂಘಗಳಿAದ ದೂರ ಸರಿಯುತ್ತಿದ್ದಾರೆ. ೨-೩ ವರ್ಷಗಳಿಂದ ಜಿಲ್ಲೆಯ ರೈತರಿಗೆ ಮಳೆಯ ನಷ್ಟದಿಂದ ಸಿಗುತ್ತಿದ್ದ ಕೃಷಿ ಫಸಲು ಹಾನಿಯ ಪರಿಹಾರ ಧನ ಸಂಪೂರ್ಣ ಸ್ಥಗಿತಗೊಂಡಿದೆ.

ಒAದು ಕಾಲದಲ್ಲಿ ಕಾಫಿ-ಭತ್ತ ಬೆಳೆಗಳ ಕಣಜ ಎಂದು ಹೆಸರುವಾಸಿಯಾಗಿದ್ದ ಕೊಡಗು ಜಿಲ್ಲೆ ಇಂದು ಏನಾಗಿದೆ?

ರೈತರ ಬಗ್ಗೆ ಸರಕಾರಗಳು ತೋರುತ್ತಿರುವ ನಿರ್ಲಕ್ಷö್ಯ ಮನೋಭಾವನೆಯಿಂದಾಗಿ ಜಿಲ್ಲೆಯ ಭತ್ತ ಬೆಳೆಯುವ ಗದ್ದೆಗಳು ಕ್ರಮೇಣ ಮನೆ, ಸೈಟುಗಳು, ಹೋಂಸ್ಟೇ, ಕಟ್ಟಡಗಳು ಹಾಗೂ ರೆಸಾರ್ಟ್ಗಳಾಗಿ ಪರಿವರ್ತನೆ ಹೊಂದುತ್ತಿವೆ. ಜಿಲ್ಲೆಯ ಕೃಷಿಕರು ಅನೇಕರು ತಮ್ಮ ತೋಟ, ಮನೆಗಳನ್ನು ಪರರಾಜ್ಯದವರಿಗೆ ಮಾರಾಟ ಮಾಡಿ ಹೋಗುತ್ತಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ. ಜಿಲ್ಲೆಯ ಈಗಿನ ಪರಿಸ್ಥಿತಿಯನ್ನು ಅವಲೋಕಿಸಿ ಅನೇಕ ಹಿರಿಯ ನಾಗರಿಕರು ತುಂಬಾ ಬೇಸರ ಹಾಗೂ ಆತಂಕ ವ್ಯಕ್ತಪಡಿಸುತ್ತಿರುವರು.

ಜಿಲ್ಲೆಯ ಜನರ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿರುವ ಈ ದಿನಗಳಲ್ಲಿ ಹೊರರಾಜ್ಯದವರು ಹೊರ ಜಿಲ್ಲೆಯವರು ಇಲ್ಲಿ ಬಂದು ನೆಲೆಸಲು ಅವರಿಗೆ ವ್ಯವಸ್ಥೆ ಮಾಡಿಕೊಡುವ ಸರಕಾರಿ ಇಲಾಖೆಗಳು ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅನಾಸಕ್ತಿ ತೋರುತ್ತಿರುವುದು ವಿಪರ್ಯಾಸ.

ಸಹಕಾರ ಸಂಘಗಳು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ. ಇದಕ್ಕೆ ಕಾರಣ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್. ರಾಜ್ಯದಲ್ಲೇ ಒಳ್ಳೆಯ ಹೆಸರು ಗಳಿಸಿದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರಿಗೆ ಜಿಲ್ಲೆಯ ಎಲ್ಲಾ ರೈತರು, ವರ್ತಕರು, ಸಹಕಾರ ಸಂಘಗಳ ಆಡಳಿತಮಂಡಳಿಯವರು ಕೃತಜ್ಞರಾಗಿರಬೇಕು. ಆದರೂ ಜಿಲ್ಲೆಯ ಕೆಲವು ಸಹಕಾರ ಸಂಘಗಳಲ್ಲಿ ದುರುಪಯೋಗ ಮುಂತಾದ ಸಮಸ್ಯೆಗಳಿಂದ ಅನೇಕ ರೈತರಿಗೆ ತೊಂದರೆಗಳಾಗಿವೆ. ಸಹಕಾರಿ ಇಲಾಖಾ ಅಧಿಕಾರಿಗಳು ಕಾಲ ಕಾಲಕ್ಕೆ ಸಹಕಾರ ಸಂಘಗಳ ಬಗ್ಗೆ ತಪಾಸಣೆ ಮಾಡುತ್ತಿದ್ದರೆ ದುರುಪಯೋಗದ ಸಮಸ್ಯೆಗಳು ಏಕೆ ಉಂಟಾಗುತ್ತದೆ.

ಜಿಲ್ಲೆಯ ರೈತರಿಗೆ ಇತ್ತೀಚಿಗಿನ ದಿನಗಳಲ್ಲಿ ಕಾಡುತ್ತಿರುವ ದೊಡ್ಡ ಸಮಸ್ಯೆ ಆನೆ ಹಾಗೂ ಮಂಗಗಳ ಕಾಟ. ರೈತ ಸಮುದಾಯ ಇದರಿಂದ ತುಂಬಾ ಕಷ್ಟ ನಷ್ಟ ಅನುಭವಿಸುವಂತಾಗಿದೆ. ಸಂಬAಧಿಸಿದ ಇಲಾಖೆಗಳು ರೈತರಿಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಸರಕಾರದ ಹಣವನ್ನು ಪರಿಹಾರದ ರೂಪದಲ್ಲಿ ರೈತರಿಗೆ ವಿತರಿಸಿ ಕೈ ತೊಳೆದುಕೊಂಡರೆ ಏನೂ ಪ್ರಯೋಜನ ಇಲ್ಲ. ರೈತರ ಜೀವಕ್ಕೆ ಬೆಲೆ ಇಲ್ಲದಂತಾದ ಸ್ಥಿತಿ ತಲೆದೋರಿದೆ.

ಕೊಡಗಿನ ರೈತರು ತುಂಬಾ ಶಿಸ್ತುಪಾಲನೆ ಮಾಡುವವರು. ಯಾವುದೇ ನಿರ್ಧಾರಗಳನ್ನು ದುಡುಕಿ ತೆಗೆದುಕೊಳ್ಳಲಾರರು. ಹಾಗಂತ ಇದನ್ನೇ ದುರುಪಯೋಗಪಡಿಸಿಕೊಳ್ಳುವ ಸರಕಾರದ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಇನ್ನು ಮುಂದೆ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ. ಮಂಡ್ಯ ಜಿಲ್ಲೆಯ ರೈತರಂತೆ ಕೊಡಗು ಜಿಲ್ಲೆಯ ರೈತರು ಸಂಘಟಿತರಾಗುತ್ತಿದ್ದಾರೆ. ವಿನಾ ಕಾರಣ ಅರಣ್ಯ ಇಲಾಖಾ ಅಧಿಕಾರಿಗಳು ರೈತರನ್ನು ಬೆದರಿಸಲು ಹೊರಟರೆ ಮುಂದಿನ ಹೋರಾಟ ಬಹಳ ಗಾಂರ‍್ಯತೆಯಿAದ ಕೂಡಿರುತ್ತದೆ. ರೈತರನ್ನು ಅನಾವಶ್ಯ ಕೆಣಕದಂತೆ ಇಲಾಖಾ ಅಧಿಕಾರಿಗಳು ಸಮಸ್ಯೆಗಳನ್ನು ಪರಿಹರಿಸಲು ಕಾರ್ಯ ಯೋಜನೆಗಳನ್ನು ರೂಪಿಸಿಕೊಳ್ಳುವುದು ಒಳ್ಳೆಯದು.

ಇತ್ತೀಚಿಗಿನ ಸರಕಾರದ ಸುತ್ತೋಲೆ ರೈತರನ್ನು ಇನ್ನೂ ರೊಚ್ಚಿಗೆಬ್ಬಿಸಿದೆ. ರೈತರು ಗೊಬ್ಬರ ಖರೀದಿಸಲು ಎಫ್.ಐ.ಡಿ. ಯನ್ನು ಕಡ್ಡಾಯವಾಗಿ ಮಾಡಿಸಬೇಕು. ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಗಳಿಗೆ ಪುನಃ ಅಲೆದಾಡಬೇಕು. ಯಾವುದೇ ರೈತ ಜಿಲ್ಲೆಯಲ್ಲಿ ತಮ್ಮ ಉಪಯೋಗಕ್ಕೆ ಖರೀದಿಸಿದ ರಸಗೊಬ್ಬರವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವುದಿಲ್ಲ. ‘ತಾ ಕಳ್ಳ ಪರರ ನಂಬ’ ಎಂಬAತಿದೆ ಸರಕಾರಿ ಅಧಿಕಾರಿಗಳ ಸುತ್ತೋಲೆ. ಈ ನಿಯಮವನ್ನು ಪಾಲಿಸಲು ಮುಂದಾದರೆ ನೂರಾರು ರೈತರು ರಸಗೊಬ್ಬರವನ್ನು ಖರೀದಿಸಲು ಸಾಧ್ಯವಿಲ್ಲ.

ಅನೇಕ ತೋಟಗಳನ್ನು ನಮ್ಮ ಜಿಲ್ಲೆಯಲ್ಲಿ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಅವರು ಇಲಾಖಾ ಕಛೇರಿಗಳಿಗೆ ಹತ್ತಾರು ಸಲ ಅಲೆದಾಡುವುದು ಅಸಾಧ್ಯ.

ಇತ್ತೀಚಿಗಿನ ಸುತ್ತೋಲೆಗಳ ಪೈಕಿ ಜಿಲ್ಲೆಯ ರೈತರು ಮತ್ತು ಕಾಫಿ ಬೆಳೆಗಾರರಿಗೆ ಜೂನ್ ತಿಂಗಳ ಮೊದಲ ವಾರ ರಸಗೊಬ್ಬರ ವಿತರಿಸಬೇಕು. ಈಗ ರಸಗೊಬ್ಬರ ವಿತರಣೆ ಸ್ಥಗಿತಗೊಳಿಸಬೇಕು. ಕೃಷಿಕರು ಯಾವಾಗ ಗೊಬ್ಬರ ಖರೀದಿಸಬೇಕೆಂದು ತಿಳಿಸುವ ಅಧಿಕಾರ ಇಲಾಖಾ ಅಧಿಕಾರಿಗಳಿಗೆ ಯಾರು ಕೊಟ್ಟರು.? ರಸಗೊಬ್ಬರದ ಬಳಕೆ, ಖರೀದಿಸುವ ಸಮಯ ರೈತರ ಸ್ವಂತ ತೀರ್ಮಾನ. ಯಾವುದೇ ಸರಕಾರಿ ಅಧಿಕಾರಿಗಳು ಈ ಬಗ್ಗೆ ನಿರ್ದೇಶನ ನೀಡುವುದು ಮೂರ್ಖತನದ ಪರಮಾವಧಿ. ರೈತರ ತೋಟಗಳ ನಿರ್ವಹಣೆ ಅವರವರೇ ತೀರ್ಮಾನ ತೆಗೆದುಕೊಳ್ಳುವುದು ಸಂಪ್ರದಾಯ ಹಾಗೂ ಪ್ರಾಕೃತಿಕ, ನೈಸರ್ಗಿಕ ನಿಯಮ. ಇದರಲ್ಲಿ ಯಾವ ಅಧಿಕಾರಿಗಳು ಮೂಗು ತೂರಿಸದಿದ್ದರೆ ಒಳ್ಳೆಯದು.

ಜಿಲ್ಲೆಯ ರೈತರು ಈಗಾಗಲೇ ಕಾಫಿ, ಭತ್ತ ಹಾಗೂ ಕಾಳುಮೆಣಸು ಫಸಲಿನ ಕುಂಠಿತದಿAದಾಗಿ ನಷ್ಟ ಅನುಭವಿಸುತ್ತಿದ್ದಾರೆ. ಹವಾಮಾನ ವೈಪರೀತ್ಯ, ಫಸಲುಗಳ ಮೇಲಿನ ಧಾರಣೆಗಳ ಕುಸಿತ ಹಾಗೂ ಕಾಡುಪ್ರಾಣಿಗಳ ಹಾವಳಿ ಮತ್ತು ಕಾರ್ಮಿಕರ ವೇತನಗಳ ಹೊಡೆತಗಳಿಂದ ತೀವ್ರ ಅಘಾತಕ್ಕೊಳಗಾಗಿದ್ದಾರೆ.

ಇಂತಹ ಸಂದರ್ಭದಲ್ಲಿ ರೈತರನ್ನು ಯಾವುದೇ ರೀತಿಯ ಹೊಸ ಕಾನೂನುಗಳಿಂದ ಕಟ್ಟಿ ಹಾಕದೇ ಅವರವರ ಪಾಡಿಗೆ ನೆಮ್ಮದಿಯ ಜೀವನ ಸಾಗಿಸಲು ಅವಕಾಶ ಮಾಡಿಕೊಡುವುದು ಸದ್ಯದ ಪರಿಸ್ಥಿತಿಗೆ ಸರಿ ಹೊಂದಬಹುದಾದ ಕ್ರಮಗಳು. ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು ತಮ್ಮ ಆಡಳಿತ ಮಂಡಳಿಯವರೊಡನೆ ಸೇರಿ ಕೇಂದ್ರ ಸಹಕಾರ ಬ್ಯಾಂಕಿನ ನೇತೃತ್ವದಲ್ಲಿ ಇತ್ತೀಚೆಗಿನ ಸರಕಾರಿ ಇಲಾಖೆಗಳ ರೈತ ವಿರೋಧಿ ಅವೈಜ್ಞಾನಿಕ ನೋಟೀಸ್‌ಗಳನ್ನು ರದ್ದು ಪಡಿಸಲು ಒಡನೆಯೇ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ.

- ಹೆಚ್. ಎಸ್. ತಿಮ್ಮಪ್ಪಯ್ಯ

ಚೆಟ್ಟಳ್ಳಿ, ಮೊ:೮೯೭೧೮೦೯೫೦೧