ವೀರಾಜಪೇಟೆ, ಏ.೨೧: ವೀರಾಜಪೇಟೆಯ ಮುಕುಟಮಣಿಯಂತೆ ಇರುವ ಶ್ರೀ ದಕ್ಷಿಣ ಮಾರಿಯಮ್ಮ ದೇವಸ್ಥಾನದಲ್ಲಿ ಮಹಾ ಕುಂಭಾಭಿಷೇಕದ ಪೂಜಾ ವಿಧಿ ವಿಧಾನಗಳಿಗೆ ಚಾಲನೆ ನೀಡಲಾಯಿತು.
ಶ್ರೀ ಮಾರಿಯಮ್ಮ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನ ಟ್ರಸ್ಟ್, ಸಾಧುಶೆಟ್ಟಿ ೨೪ ಮನೆ ತೆಲುಗು ಶೆಟ್ಟಿ ಸಂಘ, ತೆಲುಗು ಶೆಟ್ಟರ ಬೀದಿ -ವೀರಾಜಪೇಟೆ ಇವರ ವತಿಯಿಂದ ಶ್ರೀ ದಕ್ಷಿಣ ಮಾರಿಯಮ್ಮ ದೇವಿಯ ಮಹಾ ಕುಂಭಾಭಿಷೇಕದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಗಣಪತಿ ಪೂಜೆ ಮಾಡುವ ಮೂಲಕ ಕುಂಭಾಭಿಷೇಕದ ಕೈಂಕರ್ಯಗಳಿಗೆ ಚಾಲನೆ ನೀಡಲಾಯಿತು.
ಬಳಿಕ ವಾಸ್ತುಶಾಂತಿ, ಮೃತ್ ಸಂಗ್ರಹಣ, ಅಂಕುರಾರ್ಪಣೆ, ರಕ್ಷಾಬಂಧನ, ಪ್ರಥಮ ಕಾಲಾಯಾ ಪೂಜೆ, ಪ್ರಥಮ ಕಾಲ ಯಾಗಶಾಲಾ ಪ್ರವೇಶ, ಪೂರ್ಣಾಹುತಿ, ಮಹಾ ಮಂಗಳಾರತಿ ನಡೆದು ನೆರೆದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಎರಡನೆ ದಿನ ಬೆಳಿಗ್ಗೆಯಿಂದಲೇ ವಿಘ್ನೇಶ್ವರ ಪೂಜೆ, ಶಿವಸೂರ್ಯ ಪೂಜೆ, ವಿಶೇಷ ಸಂಧಿ, ಎರಡನೇ ಕಾಲ ಯಾಗಪೂಜೆ, ಮೂಲ ಮಂತ್ರ, ಅಸ್ತçಮಂತ್ರ ಹೋಮ, ದ್ರವ್ಯಾಹುತಿ, ಮಹಾಮಂಗಳಾರತಿ ನಡೆದು ಸಂಜೆ ವಿನಾಯಕ ಪೂಜೆ, ಸೋಮಕುಂಭ ಪೂಜೆ, ದ್ರವ್ಯಾಹುತಿ, ಲಲಿತ ತ್ರಿಶದಿ ಪಾರಾಯಣ, ಮಹಾಪೂರ್ಣಾಹುತಿ, ಮಹಾ ಮಂಗಳಾರತಿ, ಯಂತ್ರ ಸ್ಥಾಪನೆ, ಅಷ್ಟಬಂಧನ ಪೂಜೆ, ಅನ್ನ ಸಂತರ್ಪಣೆ ನಡೆಯಿತು.