ಕುಶಾಲನಗರ, ಏ. ೨೧: ಅಪ್ರಾಪ್ತ ಯುವತಿಗೆ ಮದುವೆ ನಿಶ್ಚಿತಾರ್ಥ ಮಾಡುತ್ತಿದ್ದ ಪ್ರಕರಣ ಹಿನ್ನೆಲೆಯಲ್ಲಿ ಸಂಬAಧಿಸಿದ ಇಲಾಖೆ ಅಧಿಕಾರಿಗಳು ಸಮಾರಂಭದ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತಡೆಯೊಡ್ಡಿ ಪೋಷಕರಿಗೆ ತಿಳಿ ಹೇಳಿ ಕ್ರಮ ಕೈಗೊಂಡ ಘಟನೆ ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ.

ಮುಳ್ಳುಸೋಗೆ ಗ್ರಾಮದ ಮನೆ ಒಂದರಲ್ಲಿ ಇತ್ತೀಚೆಗಷ್ಟೇ ೧೦ನೇ ತರಗತಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿನಿಗೆ ಪಿರಿಯಾಪಟ್ಟಣದ ಯುವಕನೊಬ್ಬನ ಜೊತೆ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಶಾಮಿಯಾನ ಹಾಕುವುದರೊಂದಿಗೆ ನಿಶ್ಚಿತಾರ್ಥ ಶಾಸ್ತ್ರಗಳು ನಡೆಯುತ್ತಿದ್ದವು. ಸ್ಥಳೀಯರ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಮತ್ತು ಕುಶಾಲ ನಗರ ಟೌನ್ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿ ಪೋಷಕರೊಂದಿಗೆ ಚರ್ಚಿಸಿ ಅಪ್ರಾಪ್ತ ವಯಸ್ಸಿನ ಯುವತಿಗೆ ನಿಶ್ಚಿತಾರ್ಥ ಅಥವಾ ವಿವಾಹ ನಡೆಸುವುದು ಕಾನೂನು ರೀತಿಯಲ್ಲಿ ಅಪರಾಧವಾಗಿದೆ ಎಂದು ತಿಳಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸಂಬAಧ ಯುವತಿಯ ಪೋಷಕರನ್ನು ಮಡಿಕೇರಿ ಕಚೇರಿಗೆ ಕರೆಯಿಸಿ ಮುಚ್ಚಳಿಕೆ ಬರೆಸಿಕೊಂಡು ತಿಳುವಳಿಕೆ ಹೇಳಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ವಿಷಯ ನಿರ್ವಾಹಕರಾದ ಯೋಗೇಶ್ ತಿಳಿಸಿದ್ದಾರೆ. ಸೋಮವಾರ ಈ ಪ್ರಕರಣ ನಡೆದಿದ್ದು ಅಧಿಕಾರಿಗಳು ಮತ್ತು ಪೊಲೀಸರ ದಿಢೀರ್ ಆಗಮನದಿಂದ ಗಲಿಬಿಲಿಗೊಂಡ ಪೋಷಕರು ನಿಶ್ಚಿತಾರ್ಥ ಸಮಾರಂಭವನ್ನು ಬಸವ ಜಯಂತಿ ಕಾರ್ಯಕ್ರಮವನ್ನಾಗಿಸಿ ಮನೆಗೆ ಬಂದಿದ್ದ ನೆಂಟರಿಗೆ ಊಟೋಪಚಾರ ಮಾಡಿ ಕಳಿಸಿಕೊಟ್ಟ ಪ್ರಸಂಗವು ನಡೆಯಿತು. - ಸಿಂಚು