ಮಡಿಕೇರಿ, ಏ. ೨೦: ಮಡಿಕೇರಿ ಸಮೀಪದ ಕಗ್ಗೋಡ್ಲು ಗ್ರಾಮ ವ್ಯಾಪ್ತಿಯ ಹುಲಿತಾಳದಲ್ಲಿ ಹುಲಿಯ ಉಪಟಳ ಮಿತಿ ಮೀರಿದೆ. ಗೋವುಗಳನ್ನು ಬಲಿಪಡೆಯುತ್ತಿರುವ ಹುಲಿಯನ್ನು ಸೆರೆ ಹಿಡಿಯುವುದಕ್ಕಾಗಿ ಅರಣ್ಯ ಇಲಾಖೆ ಕಾಮಧೇನುವೊಂದನ್ನು ತಂದು ಪಂಜರದೊಳಗಿಟ್ಟು ಸುಮಾರು ೧೫ ದಿನಗಳಾಗಿದ್ದರೂ ಹುಲಿ ಪಂಜರದತ್ತ ಸುಳಿದೇ ಇಲ್ಲ! ಪರಿಣಾಮ ಪಂಜರದೊಳಗಿರುವ ಕಾಮಧೇನು ಏಕಾಂಗಿಯಾಗಿ ಅರಣ್ಯ ಇಲಾಖೆಯವರು ನೀಡುವ ಆಹಾರವನ್ನು ಸೇವಿಸುತ್ತಾ; ರೋಧಿಸುತ್ತಾ ದಿನದೂಡುತ್ತಿದೆ.

ಹುಲಿತಾಳ ಗ್ರಾಮದ ಶಾಂತಕುಮಾರಿ ಎಂಬವರ ಸುಮಾರು ೮ ಹಸುಗಳು ಹುಲಿಗೆ ಬಲಿಯಾಗಿವೆೆ. ಕಳೆದ ನವೆಂಬರ್ ತಿಂಗಳಿನಲ್ಲಿ ಹಸುವೊಂದನ್ನು ಕೊಟ್ಟಿಗೆಯಿಂದ ಎಳೆದೊಯ್ದು ಕೊಂದು ಹಾಕಿದ ಹುಲಿ ಅಂದಿನಿAದ ಇತ್ತೀಚಿನ ದಿನಗಳವರೆಗೂ ೨ ಹಸು, ೫ ಹೋರಿ, ೧ ಕರು ಸೇರಿ ಒಟ್ಟು ಎಂಟು ಜಾನುವಾರುಗಳನ್ನು ಬಲಿ ಪಡೆದಿದೆ. ಆದರೆ ಇದುವರೆಗೂ ಯಾವುದೇ ಪರಿಹಾರದ ಹಣ ಸಂಬAಧಿಸಿದ ಇಲಾಖೆಯಿಂದ ಲಭಿಸಿಲ್ಲ ಎಂದು ಶಾಂತಕುಮಾರಿ ಆರೋಪಿಸಿದ್ದಾರೆ. ಈ ನಡುವೆ ತಮ್ಮ ಎರಡು ಕರುಗಳನ್ನು ಹುಲಿ ಬಾಯಿಗೆ ಆಹಾರವಾಗದಿರಲಿ ಎಂದು ಅವುಗಳ ಸುರಕ್ಷತೆಯ ದೃಷ್ಟಿಯಿಂದ ಬೇರೆಯವರಿಗೆ ಶಾಂತಕುಮಾರಿ ಉಚಿತವಾಗಿ ನೀಡಿದ್ದಾರೆ. ಕೊಟ್ಟಿಗೆಯಲ್ಲಿ ಮಲಗಿದ್ದ; ಮೇಯಲು ಬಿಟ್ಟಿದ್ದ ಹಸುಗಳನ್ನು ಬಲಿ ಪಡೆಯುವ ಹುಲಿಯ ಧಾಳಿಯಿಂದ ಒಂದು ಹಸುವಿನ ಕಾಲು ತುಂಡಾದ ಘಟನೆಯೂ ನಡೆದಿದ್ದು, ಕಾಲು ಕಳೆದುಕೊಂಡು ನರಳುತ್ತಿದ್ದ ಹಸುವಿನ ನರಕಯಾತನೆಯನ್ನು ನೋಡಲಾಗದೆ ಶಾಂತಕುಮಾರಿ ಅವರು ಕನಿಕರದ ಆಧಾರದಲ್ಲಿ ಪಶುವೈದ್ಯರಿಂದ ಚುಚ್ಚುಮದ್ದನ್ನು ಆ ಹಸುವಿಗೆ ಕೊಡಿಸಿ ಅದರ ಯಾತನೆಯ ಬದುಕನ್ನು ಕೊನೆಗಾಣಿಸಿದ್ದಾರೆ. ಈ ನಡುವೆ ತನಗೆ ಸೇರಿದ ಎಂಟು ಜಾನುವಾರುಗಳು ಹುಲಿಗೆ ಬಲಿಯಾಗಿದ್ದರೂ ಕೂಡ ಎಂಟರ ಪೈಕಿ ನಾಲ್ಕು ಜಾನುವಾರುಗಳು ಬೀಡಾಡಿ ಜಾನುವಾರುಗಳು ಎಂದು ಬಿಂಬಿಸುವ ಪ್ರಯತ್ನವೂ ಕೆಲವರಿಂದ ನಡೆಯಿತು ಎಂದು ಅಳಲು ತೊಡಿಕೊಂಡ ಶಾಂತಕುಮಾರಿ ಹಸುವನ್ನು ಇಡಲಾಗಿರುವ ಪಂಜರದ ಬಳಿಗೆ ‘ಶಕ್ತಿ’ ಪ್ರತಿನಿಧಿಯನ್ನು ಕರೆದೊಯ್ದು ತೋರಿಸಿ ಒಮ್ಮೊಮ್ಮೆ ಏಕಾಂಗಿಯಾಗಿ ಈ ಹಸು ರೋಧಿಸುವುದನ್ನು ಕೇಳುವಾಗ ತನ್ನ ಮನ ಕಲಕುತ್ತದೆ ಎಂದು ಮರುಗಿದರು.

ಅರಣ್ಯ ಇಲಾಖೆ ಕಾರ್ಯಾಚರಣೆ

ಇತ್ತೀಚೆಗೆ ಇಬ್ನಿವಳವಾಡಿಯಲ್ಲಿ ಕಾಣಿಸಿಕೊಂಡಿದ್ದ ಹುಲಿಯೆ ಹುಲಿತಾಳದಲ್ಲಿ ಉಪಟಳ ನೀಡುತ್ತಿದೆ ಎನ್ನಲಾಗಿದ್ದು, ಆ ಭಾಗದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಆ ವ್ಯಾಪ್ತಿಯಲ್ಲಿ ಸುಮಾರು ೨೩ ಕ್ಯಾಮೆರಾಗಳನ್ನು ಅಳವಡಿಸಿ, ಶಾಂತಕುಮಾರಿ ಅವರ ಕೊಟ್ಟಿಗೆಯ ಹಿಂಭಾಗ ಪಂಜರವನ್ನಿರಿಸಿ ಬೇರೆಡೆಯಿಂದ ಹಸುವೊಂದನ್ನು ತಂದು ಅದನ್ನು ಪಂಜರದೊಳಗಿಟ್ಟು ಅದಕ್ಕೆ ಆಹಾರ ನೀಡುತ್ತಾ ಹುಲಿ ಸೆರೆಗಾಗಿ ಕ್ರಮಕೈಗೊಂಡಿದ್ದರೂ ಹುಲಿ ಮಾತ್ರ ಪಂಜರದತ್ತ ತಲೆ ಹಾಕಿಯೂ ನೋಡುತ್ತಿಲ್ಲ! ಹುಲಿ ಸೆರೆ ಸಿಕ್ಕರೆ ಅದನ್ನು ಕೊಂಡೊಯ್ಯಲು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಬೋನನ್ನು ಕೂಡ ಅಲ್ಲಿಯೆ ಪಕ್ಕದಲ್ಲಿ ಇಡಲಾಗಿದ್ದರೂ, ಅರಣ್ಯ ಇಲಾಖೆಯ ತಂಡ ಕೂಡ ಹುಲಿ ಪತ್ತೆಗಾಗಿ ಹುಲಿತಾಳದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದರೂ ಹುಲಿ ಮಾತ್ರ ಪತ್ತೆಯಾಗಿಲ್ಲ.

ಅರ್ಜಿ ಆಧಾರದಲ್ಲಿ ಪರಿಹಾರ

ಶಾಂತಕುಮಾರಿ ಅವರಿಗೆ ಅರಣ್ಯ ಇಲಾಖೆಯಿಂದ ಪರಿಹಾರ ಸಿಗದ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಡಿಸಿಎಫ್ ಅಭಿಷೇಕ್ ಅವರು, ಹುಲಿದಾಳಿ ಘಟನೆಗಳಿಗೆ ಸಂಬAಧಿಸಿದAತೆ ಹಲವಾರು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಈ ಪೈಕಿ ಮೊದಲು ಯಾರು ಅರ್ಜಿ ಸಲ್ಲಿಸುತ್ತಾರೋ ಅವರಿಗೆ ಮೊದಲು ಪರಿಹಾರ ನೀಡಲಾಗುತ್ತದೆ. ಶಾಂತಕುಮಾರಿ ಅವರಿಗೂ ಪರಿಹಾರ ನೀಡಲಾಗುವುದು ಎಂದರು.

ದಯನೀಯ ಪರಿಸ್ಥಿತಿ

ಹುಲಿತಾಳದಲ್ಲಿ ಪಂಜರದೊಳಗೆ ಬಿಡಲಾಗಿರುವ ಹಸುವನ್ನು ಕಂಡಾಗ ಎಂತವರಿಗೂ ಅಯ್ಯೋ ಎನಿಸದಿರಲಾರದು. ಯಾರದೋ ತಪ್ಪಿಗೆ ಇನ್ಯಾರಿಗೊ ಶಿಕ್ಷೆ ಎಂಬAತಿದೆ ಅಲ್ಲಿನ ಸ್ಥಿತಿ! ಜಾನುವಾರುಗಳನ್ನು ಬಲಿ ಪಡೆದ ಹುಲಿಯ ಸೆರೆಗಾಗಿ ಪಂಜರವಿಟ್ಟು ಅದರ ಒಳಗೆ ಗೋವನ್ನು ಕಟ್ಟಿ ಹಾಕಲಾಗಿದೆ. ಪಂಜರದ ಬಳಿಗೆ ಹುಲಿ ಬಂದರೆ ಪಂಜರದಲ್ಲಿರುವ ಗೋವಿನ ಮೇಲೆ ಧಾಳಿಗೆ ಮುಂದಾಗುತ್ತದೆ. ಆ ಸಂದರ್ಭ ಹುಲಿ ಪಂಜರದೊಳಗೆ ಸೆರೆಯಾಗುತ್ತದೆ ಎಂಬುದು ಅರಣ್ಯ ಇಲಾಖೆಯ ಲೆಕ್ಕಾಚಾರ. ಆದರೆ ಮನುಷ್ಯರನ್ನೇ ಒಂದು ಕೊಠಡಿಯೊಳಗೆ ಕೂಡಿ ಹಾಕಿದರೆ ಅಲ್ಲಿ ಒಂದು ದಿನಕ್ಕಿಂತ ಹೆಚ್ಚಿನ ಕಾಲ ಇರಲು ಕಷ್ಟವಾಗುತ್ತದೆ. ಹೀಗಿರುವಾಗ ಮೂಕ ಪ್ರಾಣಿಯನ್ನು ಕಬ್ಬಿಣದ ಪಂಜರದೊಳಗೆ ಕಟ್ಟಿ ಹಾಕಿ ಸುಮಾರು ೧೫ ದಿನಗಳಾಗಿವೆÉ. ಏನೇ ಆಹಾರ ನೀಡಿದರೂ ಆರೈಕೆ ಮಾಡಿದರೂ ಬಂಧ ಮುಕ್ತವಾಗಿರುವುದಕ್ಕೂ, ಬಂಧನದಲ್ಲಿರುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಮುಕ್ತವಾಗಿ ಎಲ್ಲೆಂದರಲ್ಲಿ ಓಡಾಡಿಕೊಂಡು ಇರಬೇಕಾದ ಗೋವನ್ನು ೧೫ ದಿನಗಳಿಂದ ಬಂಧನದಲ್ಲಿರಿಸಿದರೆ ಅದರ ಮಾನಸಿಕ ಸ್ಥಿತಿ ಏನಾಗಬೇಡ? ಈ ಬಗ್ಗೆ ಅರಣ್ಯ ಇಲಾಖೆ ಚಿಂತಿಸಬೇಕಿದೆ. - ಉಜ್ವಲ್ ರಂಜಿತ್