ಮಡಿಕೇರಿ ಏ. ೨೦: ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಶ್ರೀ ಕೋಟೆ ಮಾರಿಯಮ್ಮ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ, ನಾಗದರ್ಶನ, ಪಾಷಾಣಮೂರ್ತಿ ದೈವದ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ಕೋಲ ನಡೆಯಿತು.
ನಿನ್ನೆ ಸಂಜೆ ೬ ಗಂಟೆಗೆ ಪಯ್ಯನೂರಿನ ತಂತ್ರಿಗಳಾದ ಆಚಾರ್ಯ ಈಶ್ವರನ್ ನಂಬೂದರಿ ಅವರ ನೇತೃತ್ವದಲ್ಲಿ ದೇವಿಯ ಸನ್ನಿಧಿಯಲ್ಲಿ ಧಾರ್ಮಿಕ ವಿಧಿವಿಧಾನಗಳಾದ ಆಚಾರ್ಯ ವರಣಂ, ಪುಣ್ಯಾಹ ಶುದ್ದಿ, ಸುದರ್ಶನ ಹೋಮ, ದೇವಿ ಪೂಜೆ, ಲಲಿತಾ ಸಹಸ್ರನಾಮಾರ್ಚನೆ, ಪ್ರಸಾದ ವಿತರಣೆ ನಡೆಯಿತು. ಇಂದು ಬೆಳಿಗ್ಗೆ ೬ ಗಂಟೆಗೆ ಮಹಾಗಣಪತಿ ಹೋಮ, ನವಕ ಪಂಚಗವ್ಯ ಕಳಶ ಪೂಜೆ, ನವಕ ಪಂಚಗವ್ಯ ಕಳಶಾಭಿಷೇಕ, ಸರ್ವಾಲಂಕಾರ ಮಹಾಪೂಜೆ, ಪಾಷಾಣಮೂರ್ತಿ ದೈವದ ಕಳಶ ಪೂಜೆ, ಅಲಂಕಾರ ಪೂಜೆ ಹಾಗೂ ಮಂಗಳಾರತಿ ನೆರವೇರಿತು.
ನಾಗ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಪ್ರಯುಕ್ತ ಬೆಳಿಗ್ಗೆ ೮ ಗಂಟೆಗೆ ಆಶ್ಲೇಷ ಬಲಿ, ನಾಗಪೂಜೆ, ಕ್ಷೀರಾಭಿಷೇಕ ಬಳಿಕ ದೇವಿಯ ಸನ್ನಿಧಿಯಲ್ಲಿ ತುಲಾಭಾರ ಸೇವೆ, ನಂತರ ಉಡುಪಿಯ ಪೆರ್ಲಂಬಾಡಿಯ ನಾಗಪಾತ್ರಿಗಳಾದ ಶ್ರೀ ರಮಾನಂದ ಭಟ್ ಅವರಿಂದ ನಾಗದರ್ಶನ ನಡೆಯಿತು. ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ರಾತ್ರಿ ಪಾಷಾಣಮೂರ್ತಿ ದೈವ ಕೋಲ ಜರುಗಿತು. ತಾ. ೨೧ ರಂದು (ಇಂದು) ಸಂಜೆ ೫ ಗಂಟೆಗೆ ಪಾಷಾಣಮೂರ್ತಿಯ ಅಗೆಲು ಸೇವೆ ನಡೆಯಲಿದೆ.