ನಾಪೋಕ್ಲು, ಏ.೨೦: ಬೆಳೆಗಾರರು ಜೇನು ಸಾಕಣೆ ಮಾಡುವುದರಿಂದ ಅಧಿಕ ಇಳುವರಿ ಜೊತೆಗೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರೊಫೆಸರ್ ಡಾ. ಕೆಂಚಾರೆಡ್ಡಿ ಹೇಳಿದರು.
ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಉತ್ಸವದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜೇನು ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡಗಿನ ಜೇನಿಗೆ ಸಾಕಷ್ಟು ಬೇಡಿಕೆ ಇದೆ. ಆದರೆ ಇತರೆಡೆಗಳಿಂದ ಜೇನನ್ನು ತಂದು ಕೊಡಗಿನ ಜೇನಿನ ಹೆಸರಿನಲ್ಲಿ ಮಾರಾಟ ಮಾಡುತ್ತಿರುವುದರಿಂದ ಜೇನು ಕಲಬೆರಕೆಯಾಗುತ್ತಿದೆ. ಇದನ್ನು ತಪ್ಪಿಸಲು ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿ ಕೊಡಗಿನ ಜೇನನ್ನು ಉತ್ಪಾದನೆ ಮಾಡಬೇಕು ಎಂದರು.
ಕೊಡಗಿನಲ್ಲಿ ಜೇನು ಕೃಷಿಗೆ ವಿಪುಲ ಅವಕಾಶವಿದೆ. ಜೇನು ಸೇವನೆಯಿಂದ ಆರೋಗ್ಯಕ್ಕೆ ಒಳಿತು. ಜೇನನ್ನು ಔಷಧಿಯಾಗಿಯೂ ಬಳಸುತ್ತಿರುವುದರಿಂದ ಗುಣಮಟ್ಟದ ಜೇನಿಗೆ ಸಾಕಷ್ಟು ಬೇಡಿಕೆ ಇದೆ ಎಂದರು. ಜೇನು ಕುಟುಂಬಗಳ ಸಾಕಣೆ ಮತ್ತು ನಿರ್ವಹಣೆ, ಮುನ್ನೆಚ್ಚರಿಕೆ ಕ್ರಮ, ಜೇನು ಸಾಕಣೆಯಿಂದ ಆಗುವ ಲಾಭ ಸೇರಿದಂತೆ ಸಮಗ್ರ ಮಾಹಿತಿಯನ್ನು ನೀಡಿ ರೈತರಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಿ ಮಾರ್ಗದರ್ಶನ ಮಾಡಿದರು.