ಮಡಿಕೇರಿ, ಏ. ೨೦: ಮಡಿಕೇರಿಯ ಓಂಕಾರೇಶ್ವರ- ಆಂಜನೇಯ ದೇವಾಲಯಗಳ ಅಭಿವೃದ್ಧಿ ಕುರಿತು ವ್ಯವಸ್ಥಾಪನಾ ಸಮಿತಿಯಿಂದ ಜಿಲ್ಲಾಧಿಕಾರಿ ಸೋಮಶೇಖರ್ ಅವರೊಂದಿಗೆ ಇಂದು ಚರ್ಚಿಸಲಾಯಿತು.
ದೇವಾಲಯದ ಅನೇಕ ಆಸ್ತಿಗಳು ನ್ಯಾಯಾಲಯದಲ್ಲಿ ವಿವಾದದಲ್ಲಿದ್ದು ಇನ್ನು ಕೆಲವು ಜಿಲ್ಲಾಧಿಕಾರಿಯವರ ಮಧ್ಯಸ್ಥಿಕೆಯಲ್ಲಿ ಪರಿಹಾರ ಕಾಣಬೇಕಿದೆ ಎಂದು ಸಮಿತಿ ಸದಸ್ಯರಾಗಿರುವ ವಕೀಲರಾದ ಎಂ.ಎ. ನಿರಂಜನ್ ಅವರು ಮಾಹಿತಿಯಿತ್ತರು. ಈ ಕುರಿತು ವಿಸ್ತೃತ ಚರ್ಚೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿ ಭರವಸೆಯಿತ್ತರು.
ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿರುವ ದೇವಾಲಯಕ್ಕೆ ಜಿಲ್ಲಾಡಳಿತದ ನೆರವನ್ನು ಅಧ್ಯಕ್ಷ ಚುಮ್ಮಿ ದೇವಯ್ಯ ಹಾಗೂ ಸದಸ್ಯ ಜಿ. ರಾಜೇಂದ್ರ ಕೋರಿದರು. ಜಿಲ್ಲಾಡಳಿತದಿಂದ ವಿವಿಧ ಇಲಾಖೆಗಳ ಮೂಲಕ ಲಭ್ಯವಿರುವ ಸಹಕಾರ ನೀಡುವುದಾಗಿ ಜಿಲ್ಲಾಧಿಕಾರಿ ಸೋಮಶೇಖರ್ ತಿಳಿಸಿದರು. ತಾ. ೨೬ ರಂದು ಆಂಜನೇಯ ದೇವಾಲಯದಲ್ಲಿ ಏರ್ಪಟ್ಟಿರುವ ನವಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಈ ಸಂದರ್ಭ ಜಿಲ್ಲಾಧಿಕಾರಿಯವರನ್ನು ಆಹ್ವಾನಿಸಲಾಯಿತು. ಸಮಿತಿ ಸದಸ್ಯರುಗಳಾದ ಅಂಬೆಕಲ್ ಕುಶಾಲಪ್ಪ, ಪ್ರಕಾಶ್ ಆಚಾರ್ಯ, ವಿಶಾಲ್ ನಂದಕುಮಾರ್, ಕನ್ನಂಡ ಬಿ. ಕವಿತಾ, ಕೆ. ವೀಣಾಕ್ಷಿ, ಸಂತೋಷ್ ಭಟ್ ಇವರುಗಳು ಉಪಸ್ಥಿತರಿದ್ದರು.