ಕುಶಾಲನಗರ, ಏ. ೨೦ ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿAದ ನಿಕಾನ್ ಕ್ಯಾಮರಾ ಕಾರ್ಯಾಗಾರ ಕುಶಾಲನಗರದಲ್ಲಿ ನಡೆಯಿತು.
ಕುಶಾಲನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಬೈಲುಕುಪ್ಪೆ ಬೋಧಿಸತ್ವ ಟ್ರಸ್ಟ್ ಸ್ಥಾಪಕ ಕರ್ಮ ರಿಂಫೊಚೆ ಉದ್ಘಾಟಿಸಿ ಮಾತನಾಡಿದರು. ನೂರಾರು ವರ್ಷಗಳಿಂದ ಸ್ಮರಣೆ ಮಾಡುವಂತಹ ಸೇವೆಯನ್ನು ಫೋಟೋಗ್ರಾಫರ್ಸ್ ಒದಗಿಸುತ್ತಿರುವುದು ಮಹತ್ಕಾರ್ಯ ಎಂದರು.
ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಆಧುನಿಕತೆಗೆ ತಕ್ಕಂತೆ ತಮ್ಮ ವೃತ್ತಿಯನ್ನು ಮೇಲ್ದರ್ಜೆಗೆ ಏರಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಮುಂದೆ ಸಾಗಬೇಕಿದೆ ಎಂದು ಕರೆ ನೀಡಿದರು.
ಸಮಾಜ ಸೇವಕ ಪ್ರತ್ಯಕ್ಷ ಹುತ್ತಿನಗದ್ದೆ ಉದಯ್ ಮಾತನಾಡಿ, ಫೋಟೋಗ್ರಫಿ ಹಲವು ಮಜಲುಗಳನ್ನು ದಾಟಿ ಶುಭ ಸಮಾರಂಭಗಳಲ್ಲಿ ಇಂದು ಬಹುಮುಖ್ಯ ಪಾತ್ರ ವಹಿಸಿದೆ ಎಂದರು. ಕುಶಾಲನಗರ ರೋಟರಿ ಪ್ರಮುಖರಾದ ಎಂ.ಡಿ ರಂಗಸ್ವಾಮಿ, ಕರವೇ ರಾಜ್ಯ ಸಂಚಾಲಕಿ ದೀಪ ಪೂಜಾರಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆವರ್ತಿ ಆರ್ ಮಹದೇವಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಆರ್ಥಿಕ ಸಹಕಾರಕ್ಕೆ ಮನವಿ ಮಾಡಿದರು. ಸಮಾಜ ಸೇವಕರಾದ ಹರಪಳ್ಳಿ ರವೀಂದ್ರ ಮತ್ತು ಅನುಪಮಾ ಆರ್ಯ ಅವರುಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ರೋಷನ್, ಕಾರ್ಯದರ್ಶಿ ಲವಕುಮಾರ್, ಖಜಾಂಚಿ ಪ್ರಕಾಶ್ ಕುಂಜಿಲನ, ಮಡಿಕೇರಿ ತಾಲೂಕು ಅಧ್ಯಕ್ಷ ಸುರೇಶ್ ಮಾವಾಡ್ಕರ್, ಕುಶಾಲನಗರ ತಾಲೂಕು ಅಧ್ಯಕ್ಷ ವಿಜಯಕುಮಾರ್, ದಕ್ಷಿಣ ಕೊಡಗು ಅಧ್ಯಕ್ಷ ಡಿ.ಸಿ ರವೀಂದ್ರ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸೋಲಮನ್ ಡೇವಿಡ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಇದ್ದರು.