ನಾಪೋಕ್ಲು, ಏ. ೨೦: ಎಲ್ಲಾ ಧರ್ಮಗಳು ಶಾಂತಿ, ಪ್ರೀತಿ, ಸೌಹಾರ್ದತೆಯನ್ನು ಪ್ರತಿಪಾದಿಸುತ್ತವೆ. ಶಾಂತಿ ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಸಮೀಪದ ಎಮ್ಮೆಮಾಡು ಮಖಾಂ ಉರೂಸ್ ಅಂಗವಾಗಿ ಆಯೋಜಿಸಲಾಗಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಯಾವ ಧರ್ಮವು ದ್ವೇಷವನ್ನು ಪ್ರತಿಪಾದಿಸಿಲ್ಲ. ದ್ವೇಷದಿಂದ ಏನನ್ನು ಸಾಧಿಸಲಾಗದು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಮಾನತೆಯನ್ನು ತರುವ ಕೆಲಸ ಆಗಬೇಕಿದೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಎಲ್ಲರೂ ಬಾಳಬೇಕು ಎಂದು ಕಿವಿಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯಿದ್ ಅಶ್ರಫ್ ತಂಗಳ್ ಆದೂರು ಅವರು ವಹಿಸಿದ್ದರು. ಎ.ಪಿ. ಹಂಝ ಸಖಾಫಿ ಮೇಲ್ಮುರಿ ಉದ್ಘಾಟಿಸಿದರು. ಭಾಷಣಕಾರರಾಗಿ ಸುಫಿಯಾನ್ ಸಖಾಫಿ ಗಂಗಾವತಿ ಮತ್ತು ಸಯ್ಯಿದ್ ಶಿಹಾಬುದ್ದೀನ್ ತಂಗಳ್ ಎಮ್ಮೆಮಾಡು, ರಾಝಿಕ್ ಫೈಝಿ ಸೇರಿದಂತೆ ಇನ್ನಿತರರು ಮಾತನಾಡಿದರು. ಈ ಸಂದರ್ಭ ಜಮಾತ್ ಅಧ್ಯಕ್ಷ ಹುಸೈನ್ ಸಖಾಫಿ, ಪ್ರಮುಖರಾದ ಎರ್ಮು ಹಾಜಿ, ಮೊಹಮ್ಮದ್ ಹಾಜಿ ಕುಂಜಿಲ, ಅಬ್ದುಲ್ ರೆಹಮನ್, ಹಂಸ ಕೊಟ್ಟಮುಡಿ, ಇಸ್ಮಾಯಿಲ್ ನಾಪೋಕ್ಲು, ಯಾಕೂಬ್, ಹಂಝ ಪಡಿಯಾಣಿ, ಕರೀಂ ಆಜು, ಅಶ್ರಫ್ ಬಿ.ಯು. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.